ಒಬ್ಬವ್ಯಕ್ತಿಯ ಹಕ್ಕುಗಳ ಉಲ್ಲಂಘನೆಯಾದಾಗ ಮಾತ್ರವಲ್ಲದೆ, ಆತನನ್ನು ಅಸಮರ್ಥನೀಯವಾದ ರೀತಿಯಲ್ಲಿ ಉದ್ಯೋಗದಾತರು ಶಿಕ್ಷಿಸಿದಾಗಲೂ ನ್ಯಾಯಾಲಯ ಮಧ್ಯೆ ಪ್ರವೇಶಿಸಬಹುದಾಗಿದೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ಬಿ.ಸಿನ್ಹಾ ಮತ್ತು ಎಲ್.ಎಸ್.ಪಂತ ಅವರನ್ನೊಳಗೊಂಡ ನ್ಯಾಯಪೀಠವು ಈ ತೀರ್ಪು ನೀಡಿದೆ. ಸಂವಿಧಾನದ ವಿಧಿ 14ರಡಿ ಬರುವ ಸಮಾನತೆಯ ಕಲ್ಪನೆಯು, ಅದು ನ್ಯಾಯಾಂಗವೇ ಅಥವಾ ಕಾರ್ಯಾಂಗವೇ ಎಂಬ ಲಕ್ಷವಿಲ್ಲದೆ, ಸಂಪೂರ್ಣ ರಾಷ್ಟ್ರದ ಕ್ರಿಯೆಯನ್ನು ವ್ಯಾಪಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.
"ಅಂತೆಯೇ ಇದು, ಒಬ್ಬ ವ್ಯಕ್ತಿಯ ಹಕ್ಕಿನ ಚಲಾವಣೆಯ ವೇಳೆಗಿನ ಪಕ್ಷಪಾತ ಮಾತ್ರವಲ್ಲದೆ, ಆತನ ಮೇಲೆ ಬಾಧ್ಯತೆ ಹೇರುವ ವೇಳೆಗೂ ಇದು ವ್ಯಾಪಿಸುತ್ತದೆ" ಎಂಬುದಾಗಿ ಸರ್ವೋಚ್ಛ ನ್ಯಾಯಾಲವು, ಹರ್ಯಾಣ ಸರಕಾರವು ಸಬ್ಇನ್ಸ್‌ಪೆಕ್ಟರ್ ಒಬ್ಬರಿಗೆ ವಿಧಿಸಿರುವ ಶಿಕ್ಷೆಯನ್ನು ಅನೂರ್ಜಿತಗೊಳಿಸುವ ವೇಳೆಗೆ ಹೇಳಿದೆ.
ಕರ್ತವ್ಯ ನಿರ್ವಹಣೆಯಲ್ಲಿ ಅಸಡ್ಡೆ ತೋರಿರುವ ಕಾರಣ ನೀಡಿ, ಇಲಾಖಾ ತನಿಖೆಯ ಬಳಿಕ ಶಿಕ್ಷೆಯ ರೂಪದಲ್ಲಿ ಮಾನ್ ಸಿಂಗ್ ಅವರ ಎರಡು ಇನ್‌ಕ್ರಿಮೆಂಟ್ ತಡೆಹಿಡಿಯಲಾಗಿತ್ತು. ಅವರು ರೊಹ್ಟಕ್‌ನಲ್ಲಿ ಎಸ್‌ಐ ಆಗಿದ್ದ ವೇಳೆ, ಹೈದರಾಬಾದಿನಿಂದ ಚಂಡೀಗಢಕ್ಕೆ ಎರಡು ಸರಕಾರಿ ವಾಹನಗಳನ್ನು ಸಾಗಿಸುವ ನೇತೃತ್ವ ವಹಿಸಲು ರೂಪಿಸಲಾಗಿದ್ದ, ಎಎಸ್ಐ ಸುಚ ಸಿಂಗ್ ಹಾಗೂ ಮುಖ್ಯ ಪೊಲೀಸ್ ಪೇದೆಗಳಾದ ಸುರೇಶ್ ಭಾನ್ ಮತ್ತು ವಿಜಯ್ ಪಾಲ್ ಅವರನ್ನೊಳಗೊಂಡ ತಂಡದ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿತ್ತು.
ಈ ವೇಳೆ ವಿಜಯ್ ಪಾಲ್, ಮಾನ್ ಸಿಂಗ್ ಅವರಿಗೆ ತಿಳಿಸದೆಯೇ, 12 ಮದ್ಯದ ಬಾಟಲುಗಳನ್ನು ವಾಹನದ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದು, ಇದನ್ನು ಆಂಧ್ರಪ್ರದೇಶದ ಅಬಕಾರಿ ಇಲಾಖೆಯ ಅಧಿಕಾರಿಗಳು ಮುಟ್ಟುಗೋಲುಹಾಕಿದ್ದರು.
ಈ ಕುರಿತು ನಡೆಸಲಾದ ಇಲಾಖಾ ತನಿಖೆಯ ಬಳಿಕ ಅಧಿಕಾರಿಗಳು, ಅಪರಾಧ ನ್ಯಾಯಾಲಯವು ನಿರ್ದೋಷಿ ಎಂದು ಪರಿಗಣಿಸಿದ್ದ ಆಧಾರದಲ್ಲಿ, ವಿಜಯ್ ಪಾನ್‌ನನ್ನು ನಿರಪರಾಧಿಯೆಂದು ತೀರ್ಮಾನಿಸಿದ್ದರು. ಬದಲಿಗೆ, ಮಾನ್ ಸಿಂಗ್ ಅವರಿಗೆ ಎರಡು ಇನ್‌ಕ್ರಿಮೆಂಟ್ ತಡೆಯುವ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
|