ನಿತೀಶ್ ಕತಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಉತ್ತರ ಪ್ರದೇಶದ ರಾಜಕಾರಣಿ ಡಿ.ಪಿ.ಯಾದವ್ ಪುತ್ರ ವಿಕಾಸ್ ಹಾಗೂ ಆತನ ಸೋದರ ಸಂಬಂಧಿ ವಿಶಾಲ್ ಯಾದವ್ ಅವರುಗಳು ತಪ್ಪಿತಸ್ಥರು ಎಂದು ದೆಹಲಿಯ ನ್ಯಾಯಾಲಯವೊಂದು ಬುಧವಾರ ತೀರ್ಪು ನೀಡಿದೆ.
ಈ ಇಬ್ಬರು ದೋಷಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಶುಕ್ರವಾರದಂದು ಘೋಷಿಸಲಿದೆ. ಜೀವಾವಧಿ ಶಿಕ್ಷೆಯಿಂದ ಹಿಡಿದು ಮರಣದಂಡನೆಯ ತನಕ ಯಾವುದೇ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಕಾಸ್ ಮತ್ತು ವಿಶಾಲ್ ಅವರ ವಿರುದ್ಧ, ಕೊಲೆ, ಅಪಹರಣ ಮತ್ತು ಸಾಕ್ಷಿಗಳನ್ನು ನಾಶಪಡಿಸಿದ ಆರೋಪ ಹೊರಿಸಲಾಗಿದೆ.
ದೆಹಲಿಯ ಹಿರಿಯ ಅಧಿಕಾರಿಯೊಬ್ಬರ ಪುತ್ರ ಮೃತ ನಿತೀಶ್ ಕತಾರ(24), ವಿಕಾಸ್‌ನ ಸಹೋದರಿಯೊಂದಿಗೆ ಸಂಬಂಧ ಹೊಂದಿದ್ದು, ಇದು ಯಾದವ್ ಕುಟುಂಬಕ್ಕೆ ಸಹ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಯಾದವ್‌ಗಳು ಆತನ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಹಾನಿಗೊಂಡಿದ್ದ ಕತಾರನ ಮೃತದೇಹವು 2002ರ ಫೆಬ್ರವರಿ 17ರಂದು ನಸುಕಿನಲ್ಲಿ ಪತ್ತೆಯಾಗಿತ್ತು.
ನ್ಯಾಯಾಲಯದ ಈ ತೀರ್ಪಿಗೆ ಪ್ರತಿಕ್ರಿಯಿಸಿರುವ ಕತಾರ ಅವರ ತಾಯಿ ನೀಲಂ, "ನಾನು ದೇವರು, ನ್ಯಾಯಾಂಗ ಮತ್ತು ನನ್ನ ಪರವಾಗಿ ನಿಂತ ಈ ರಾಷ್ಟ್ರದ ಜನತೆಗೆ ಆಭಾರಿಯಾಗಿದ್ದೇನೆ. ಈ ತೀರ್ಪು ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಬದಲಿಸಲಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಅವರು ತನ್ನ ಪುತ್ರನ ಸಾವಿಗಾಗಿ ಹೋರಾಟ ನಡೆಸಿದ್ದರು.
|