ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಮನಾಲಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕಾರಣ ರಾಜ್ಯದಲ್ಲಿ ನೂತನ ಸರಕಾರದ ಪ್ರಮಾಣ ವಚನ ಸ್ವೀಕಾರ ಎರಡು ದಿನಗಳ ಕಾಲ ಮುಂದೂಡಲ್ಪಟ್ಟಿದೆ.
ರಾಜ್ಯದಲ್ಲಿ ಹೇರಲಾಗಿರುವ ರಾಷ್ಟ್ರಪತಿ ಆಳ್ವಿಕೆಯ ಹಿಂತೆಗೆತದ ಕುರಿತು ಕೇಂದ್ರ ಸಂಪುಟ ತೀರ್ಮಾನ ಕೈಗೊಂಡಿದ್ದರೂ, ರಾಷ್ಟ್ರಪತಿಯವರು ಪ್ರವಾಸದಲ್ಲಿರುವ ಕಾರಣ ಈ ನಿರ್ಧಾರಕ್ಕೆ ಅವರ ಅಂಗೀಕಾರದ ಸಹಿ ಬಿದ್ದಿಲ್ಲ.
ರಾಷ್ಟ್ರಪತಿಯವರು ಪ್ರವಾಸದಲ್ಲಿದ್ದರೂ ಅತ್ಯವಶ್ಯಕ ಸಂದರ್ಭದಲ್ಲಿ ಅವರನ್ನು ಸಂಪರ್ಕಿಸಬಹುದಾಗಿದೆ. ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಈ ಹಿಂದೆ ಮಾಸ್ಕೋ ಪ್ರವಾಸದಲ್ಲಿದ್ದ ವೇಳೆ ಬಿಹಾರವನ್ನು ಕೇಂದ್ರಾಡಳಿತದ ವ್ಯಾಪ್ತಿಗೆ ತರುವ ನಿರ್ಧಾರಕ್ಕೆ ಸಹಿಮಾಡಿದ ಉದಾಹರಣೆ ಇದೆ. ಆದರೆ ಪ್ರಸ್ತುತ ವಿಳಂಬವು ಬಿಜೆಪಿಯಲ್ಲಿ ಅಸಮಾಧಾನ ಹುಟ್ಟಿಸಿದೆ.
ರಾಜಭವನದಲ್ಲಿ ಬಿಜೆಪಿ ನಾಯಕರು ಸೋಮವಾರ ರಾತ್ರಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿಯಾದ ವೇಳೆಗೆ ಈ ತಾಂತ್ರಿಕ ಕಾರಣವನ್ನು ಮುಂದಿಟ್ಟಿದ್ದರು. "ಎಲ್ಲವೂ ಸರಿಯಾಗಿದೆ, ಆದರೆ ನೂತನ ಸರಕಾರವು ಬುಧವಾರ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಿಲ್ಲ" ಎಂಬುದಾಗಿ ಬಿಜೆಪಿ ನಾಯಕರಿಗೆ ರಾಜ್ಯಪಾಲರು ಹೇಳಿದರೆನ್ನಲಾಗಿದ್ದು, ಇದರಿಂದ ಬಿಜೆಪಿ ನಾಯಕರು ಆಚ್ಚರಿಗೊಂಡರೆಂದು ಹೇಳಲಾಗಿದೆ.
ರಾಜ್ಯವು ಇನ್ನೂ ರಾಷ್ಟ್ರಪತಿ ಆಳ್ವಿಕೆಯಲ್ಲೇ ಇದೆ ಎಂಬ ಗೃಹ ಸಚಿವಾಲಯದ ಪತ್ರವನ್ನು ಠಾಕೂರ್ ಈ ಸಂದರ್ಭದಲ್ಲಿ ಓದಿ ಹೇಳಿದ್ದಾರೆ. ರಾಷ್ಟ್ರಪತಿಯವರು ಮನಾಲಿಯಲ್ಲಿ ವಿಶ್ರಾಂತಿಯಲ್ಲಿರುವ ಕಾರಣ ಮೂರು ದಿನಗಳ ಕಾಲ ಏನೂ ಮಾಡುವಂತಿಲ್ಲ ಎಂದು ಹೇಳಿದರೆನ್ನಲಾಗಿದೆ.
ಸೋಮವಾರ ರಾತ್ರಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿಯವರು ಎಲ್.ಕೆ.ಆಡ್ವಾಣಿಯವರಿಗೆ ಕರೆನೀಡಿದ್ದು, ಈ ವಿಚಾರ ತಿಳಿಸಿದ್ದರು. ಆಡ್ವಾಣಿಯವರು ರಾತ್ರಿ 10.30ರ ವೇಳೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸಂಪರ್ಕಿಸಿದ್ದರು. ಪ್ರಧಾನಿಯವರು ಗೃಹಸಚಿವ ಶಿವರಾಜ್ ಪಾಟೀಲ್ ಅವರೊಂದಿಗೆ ಮಾತನಾಡಿದ್ದು, ಮಂಗಳವಾರ ಸಂಪುಟ ಸಭೆ ನಡೆಸುವುದಾಗಿ ತಿರುಗಿ ಆಡ್ವಾಣಿಯವರಿಗೆ ಹೇಳಿದರೆಂದು ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ಆಳ್ವಿಕೆ ಹಿಂತೆಗೆತಕ್ಕೆ ಸಂಪುಟ ನಿರ್ಧಾರ ಕೇಂದ್ರ ಸಂಪುಟವು ಮಂಗಳವಾರ ರಾತ್ರಿ ಸಭೆ ಸೇರಿದ್ದು, ಕರ್ನಾಟಕದಲ್ಲಿ ಹೊಸ ಸರಕಾರ ರಚನೆಗೆ ಹಾದಿ ಸುಗಮಪಡಿಸುತವಂತೆ ರಾಷ್ಟ್ರಪತಿಯವರನ್ನು ವಿನಂತಿಸಲು ನಿರ್ಧರಿಸಿದೆ.
ಮಂಗಳವಾರದ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಮಾತ್ರ ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ. 2007ರ ನವೆಂಬರ್ 20ರಂದು ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.
|