ನೊಯ್ಡಾ: ನೊಯ್ಡಾದ ಅರುಷಿ ಹತ್ಯೆ ಪ್ರಕರಣವನ್ನು ಸಿಬಿಐಗೊಪ್ಪಿಸಬೇಕು ಎಂಬ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿಯವರ ಒತ್ತಾಯವನ್ನು ತಳ್ಳಿಹಾಕಿರುವ ಕೇಂದ್ರ ಗೃಹಖಾತೆ ರಾಜ್ಯಸಚಿವ ಶ್ರೀಪ್ರಕಾಶ್ ಜೈಸ್ವಾಲ್, ಉತ್ತರಪ್ರದೇಶದ ವಿಶೇಷ ಕಾರ್ಯಪಡೆಯು ಈಗಾಗಲೇ ತನಿಖೆ ನಡೆಸುತ್ತಿರುವುದರಿಂದ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಅಪ್ರಾಪ್ತ ವಯಸ್ಕ ಬಾಲಕಿಯ ಹತ್ಯೆಗೆ ಕಾಂಗ್ರೆಸ್ ರಾಜಕೀಯ ಬಣ್ಣ ಬಳಿಯುತ್ತಿದೆ ಎಂದು ಯುಪಿಎ ಸರ್ಕಾರದ ವಿರುದ್ಧ ಕಿಡಿಕಾರಿದ ಮಾಯಾವತಿ, ನಮ್ಮ ಶಿಫಾರಸುಗಳನ್ನು ಸ್ವೀಕರಿಸದಂತೆ ಸಿಬಿಐ ಮೇಲೆ ಒತ್ತಡ ಹೇರಿದಂತೆ ಕಂಡುಬಂದಿದೆ ಎಂದು ಮಾಯಾವತಿ ಹೇಳಿದ್ದಾರೆ.
ತಪ್ಪಿತಸ್ಥರಿಗೆ ಮಾತ್ರ ತಮ್ಮ ಸರ್ಕಾರ ಶಿಕ್ಷೆ ವಿಧಿಸುತ್ತದೆಯೇ ಹೊರತು ಅಮಾಯಕರಿಗಲ್ಲ ಎಂದು ಹೇಳಿದ ಮಾಯಾವತಿ ಉ.ಪ್ರ. ಡಿಐಜಿಗೆ ಕೇಂದ್ರಸರ್ಕಾರದ ನೋಟಿಸ್ ಸಮಂಜಸವಲ್ಲ ಎಂದು ಹೇಳಿದರು. ಉತ್ತರಪ್ರದೇಶ ಪೊಲೀಸರು ಅರುಷಿಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದೆಯೆಂದು ಕೇಂದ್ರ ಸಚಿವ ರೇಣುಕಾ ಚೌಧರಿ ಪ್ರತಿಕ್ರಿಯೆಗೆ ಉತ್ತರಿಸಿದ ಮಾಯಾವತಿ ಕೇಂದ್ರ ಸರಕಾರವು ಸ್ಥಳೀಯ ಪೊಲೀಸರಿಗೆ ನೆರವು ನೀಡುವುದನ್ನು ಬಿಟ್ಟು ಟೀಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.
|