ನಿತೀಶ್ ಕತಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ರಾಜಕಾರಣಿ ಡಿ.ಪಿ.ಯಾದವ್ ಪುತ್ರ ವಿಕಾಸ್ ಯಾದವ್ ಮತ್ತು ಆತನ ಸೋದರ ಸಂಬಂಧಿ ವಿಶಾಲ್ ಅವರುಗಳಿಗೆ ದೆಹಲಿಯ ನ್ಯಾಯಾಲಯವೊಂದು ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಕಾಸ್ ಮತ್ತು ವಿಶಾಲ್ ಅವರ ವಿರುದ್ಧ, ಕೊಲೆ, ಅಪಹರಣ ಮತ್ತು ಸಾಕ್ಷಿಗಳನ್ನು ನಾಶಪಡಿಸಿದ ಆರೋಪ ಹೊರಿಸಲಾಗಿದ್ದು, ಇವರನ್ನು ತಪ್ಪಿತಸ್ಥರು ಎಂದು ಬುಧವಾರ ನ್ಯಾಯಾಲಯ ತೀರ್ಮಾನಿಸಿತ್ತು. ಇವರಿಗೆ ಶಿಕ್ಷೆ ಘೋಷಿಸಿದ ಹೆಚ್ಚುವರಿ ನ್ಯಾಯಾಧೀಶ ರವೀಂದ್ರ ಕೌರ್ ಅವರು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸುವುದಾಗಿ ಹೇಳಿದ್ದು, ಮರಣದಂಡನೆಗೆ ಈ ಪ್ರಕರಣ ಯೋಗ್ಯವಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ದೆಹಲಿಯ ಹಿರಿಯ ಅಧಿಕಾರಿಯೊಬ್ಬರ ಪುತ್ರ ಮೃತ ನಿತೀಶ್ ಕತಾರ(24), ವಿಕಾಸ್‌ನ ಸಹೋದರಿಯೊಂದಿಗೆ ಸಂಬಂಧ ಹೊಂದಿದ್ದು, ಇದು ಯಾದವ್ ಕುಟುಂಬಕ್ಕೆ ಸಹ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಯಾದವ್‌ಗಳು ಆತನ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಹಾನಿಗೊಂಡಿದ್ದ ಕತಾರನ ಮೃತದೇಹವು 2002ರ ಫೆಬ್ರವರಿ 17ರಂದು ನಸುಕಿನಲ್ಲಿ ಪತ್ತೆಯಾಗಿತ್ತು.
|