ದೇಶದ ಮಿಲಿಯಾಂತರ ರೈತರ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಾರುತವು ಈ ಹಿಂದೆ ಘೋಷಿಸಿದ್ದಕ್ಕಿಂತ ಎರಡು ದಿನ ತಡವಾಗಿ ಕೇರಳ ಪ್ರವೇಶಿಸಿದ್ದು, ಕೃಷಿ ಚಟುವಟಿಕೆಗಳಿಗೆ ರೈತಾಪಿ ವರ್ಗ ಸಜ್ಜಾಗುತ್ತಿದೆ.
ಮುಂಗಾರು ಮಾರುತ ಕೇರಳ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಬಿ.ಪಿ.ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಮೊದಲು, ಮಾಮೂಲಿ ಜೂನ್ 1ಕ್ಕಿಂತ ಮೂರು ದಿನ ಮುಂಚಿತವಾಗಿ ಮೇ 29ರಂದು ಮುಂಗಾರು ಮಾರುತ ಕೇರಳವನ್ನು ಪ್ರವೇಶಿಸಲಿದೆ ಎಂದು ಇಲಾಖೆ ಹೇಳಿತ್ತು.
ಕೇರಳಕ್ಕೆ ಮುಂಗಾರು ಮಾರುತ ಪ್ರವೇಶಿಸಿತೆಂದರೆ, ದೇಶದ ಪ್ರಮುಖ ಮಳೆಯಾಧಾರಿತ ಪ್ರದೇಶಗಳಲ್ಲಿ ಮಳೆಗಾಲ ಬಂತೆಂದೇ ಅರ್ಥ. ಸರಿಯಾದ ಪ್ರಮಾಣದಲ್ಲಿ ಮಳೆ ಬಂತೆಂದರೆ, ಅಕ್ಕಿ, ಸೋಯಾಬೀನ್, ನೆಲಗಡಲೆ ಬೆಳೆಗಳ ಕೃಷಿಗೆ ಪೂರಕವಾಗುತ್ತದೆ ಮತ್ತು ಈಗಾಗಲೇ ಶೇ.8.1 ರ ಹಣದುಬ್ಬರಿಂದಾಗಿ ಏರುತ್ತಿರುವ ಆಹಾರ ಧಾನ್ಯಗಳ ಬೆಲೆಯಿಂದ ತತ್ತರಿಸುತ್ತಿರುವ ಕೇಂದ್ರ ಸರಕಾರದ ಬೆಲೆ ನಿಯಂತ್ರಣ ಕ್ರಮಗಳಿಗೂ ಪೂರಕವಾಗುವ ನಿರೀಕ್ಷೆ ಇದೆ.
ದೇಶದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಲ್ಲಿ, ಅಕ್ಕಿ ಬೆಲೆ ಸುಧಾರಿಸಬಹುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಈಗಾಗಲೇ ಆಶಾವಾದ ವ್ಯಕ್ತಪಡಿಸಿದ್ದಾರೆ.
|