ಅಕ್ಟೋಬರ್ 2ರಿಂದ ಕೇಂದ್ರವು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧವನ್ನು ಕಡ್ಡಾಯವಾಗಿ ಜಾರಿಗೊಳಿಸಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅನ್ಬುಮಣಿ ರಾಮದಾಸ್ ಹೇಳಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನವನ್ನು ನಿಷೇಧಿಸುವ ಕಾಯಿದೆಯನ್ನು ಎರಡೂವರೆ ವರ್ಷಗಳ ಹಿಂದೆಯೇ ಕೇಂದ್ರವು ಜಾರಿಗೆ ತಂದಿತ್ತು. ಆದರೆ ಅದು ಕಾಗದದಲ್ಲಿ ಮಾತ್ರವೇ ಉಳಿದಿತ್ತು. ಈಗ, ಈಗಾಗಲೇ ಅನುಷ್ಠಾನದಲ್ಲಿರುವ ಕಾನೂನಿಗೆ ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ ಮತ್ತು ಅದು 2008ರ ಅಕ್ಟೋಬರ್ 2ರಿಂದ ಕಟ್ಟು ನಿಟ್ಟಾಗಿ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದರು.
ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ, ವ್ಯಾಪಾರ, ಉತ್ಪಾದನೆ, ಪೂರೈಕೆ ಮತ್ತು ವಿತರಣೆ ಮೇಲಿನ ನಿಯಂತ್ರಣ) ಕಾಯಿದೆ -2003ಗೆ ಸರಕಾರವು ಮೇ 30ರಂದು ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಇದರ ಪ್ರಕಾರ, ಶಾಪಿಂಗ್ ಮಾಲ್‌ಗಳಲ್ಲಿ, ಸಿನೆಮಾ ಮಂದಿರಗಳಲ್ಲಿ, ಸಾರ್ವಜನಿಕ/ಖಾಸಗಿ ಕಚೇರಿಗಳಲ್ಲಿ, ಹೋಟೆಲ್‌ಗಳಲ್ಲಿ, ಡಿಸ್ಕೊಥೆಕ್‌ಗಳಲ್ಲಿ, ಕ್ಯಾಂಟೀನ್‌ಗಳಲ್ಲಿ, ಕಾಫೀ ಹೌಸ್‌ಗಳು, ಪಬ್, ಬಾರ್. ವಿಮಾನ ನಿಲ್ದಾಣದ ಲಾಂಜ್, ರೈಲ್ವೇ ಸ್ಟೇಶನ್‌ಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ವಿವರಿಸಿರುವ ರಾಮದಾಸ್, ಜನರು ರಸ್ತೆಗಳಲ್ಲಿ ಇಲ್ಲವೇ ತಮ್ಮ ಮನೆಗಳಲ್ಲಿ ಹೊರತುಪಡಿಸಿ ಬೇರೆಲ್ಲೂ ಧೂಮಪಾನ ಮಾಡುವಂತಿಲ್ಲ ಎಂದು ಹೇಳಿದರು.
|