ಆಂಧ್ರಪ್ರದೇಶದಲ್ಲಿ ನಾಲ್ಕು ಲೋಕಸಭೆ ಮತ್ತು 18 ವಿಧಾನಸಭೆ ಸ್ಥಾನಗಳಿಗೆ ನಡೆದ ಮರುಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಮುಖ್ಯ ಪ್ರತಿಪಕ್ಷ ಟಿಡಿಪಿ ಗಮನಾರ್ಹ ಸಾಧನೆ ತೋರಿದ್ದರೆ, ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಹಿನ್ನಡೆ ಅನುಭವಿಸಿದೆ. ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಉಪಚುನಾವಣೆಗೆ ದಾರಿಕಲ್ಪಿಸಿದ ಟಿಆರ್ಎಸ್ ತಾನು ತೆರವು ಮಾಡಿದ 16 ಸ್ಥಾನಗಳಲ್ಲಿ 7 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಟಿಆರ್‌ಎಸ್ ವರಿಷ್ಠ ಕೆ.ಚಂದ್ರಶೇಖರ್ ರಾವ್ ಈ ಬಾರಿ ಕರೀಂನಗರ ಲೋಕಸಭೆ ಸ್ಥಾನವನ್ನು 15,289 ಮತಗಳ ಕಡಿಮೆ ಅಂತರದಲ್ಲಿ ಗೆದ್ದಿರುವುದು ಪಕ್ಷಕ್ಕೆ ಹಿನ್ನಡೆಯ ದ್ಯೋತಕವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಟಿಆರ್‌ಎಸ್‌ನಿಂದ ಅದಿಲಾಬಾದ್ ಲೋಕಸಭೆ ಸ್ಥಾನವನ್ನು ಕಿತ್ತುಕೊಂಡಿದೆ. ವಾರಂಗಲ್‌ನಲ್ಲಿ ಇತ್ತೀಚಿನ ಚುನಾವಣೆ ಟ್ರೆಂಡ್ ಪ್ರಕಾರ ಟಿಡಿಪಿ ಮುನ್ನಡೆ ಸಾಧಿಸಿದೆ. ಟಿಆರ್‌ಎಸ್ ಹನುಮಕೊಂಡ ಲೋಕಸಭೆ ಕ್ಷೇತ್ರವನ್ನು ಉಳಿಸಿಕೊಂಡಿದೆ.
ತೆಲಂಗಾಣವನ್ನು ಭಾವನಾತ್ಮಕ ವಿಷಯವಾಗಿಸಿಕೊಂಡು ಅದರ ಮೇಲೆ ಅವಲಂಬಿತವಾಗಿರುವ ಟಿಆರ್‌ಎಸ್‌ನ ಅಭ್ಯರ್ಥಿಗಳು ಅನೇಕ ಕ್ಷೇತ್ರಗಳಲ್ಲಿ ಅವಮಾನಕರ ಸೋಲುಂಡಿದ್ದಾರೆ.ಕ್ಷದ ವಿಜಯರಾಮ ರಾವ್ ಟಿಡಿಪಿಯ ಶ್ರೀಹರಿ ಅವರ ವಿರುದ್ಧ ವಾರಂಗಲ್‌ನ ಸ್ಟೇಷನ್ ಘಾನಾಪುರದಲ್ಲಿ ಸೋತಿದ್ದಾರೆ. ತೆಲಂಗಾಣ ಚಳವಳಿಯ ಮುಖ್ಯಕೇಂದ್ರವೆಂದು ಅದನ್ನು ಪರಿಗಣಿಸಲಾಗಿತ್ತು.
ವಿಕಾರಾಬಾದ್‌ನಲ್ಲಿ ಇನ್ನೊಬ್ಬ ಟಿಆರ್‌ಎಸ್ ಅಭ್ಯರ್ಥಿ ಎ.ಚಂದ್ರಶೇಖರ್ ಠೇವಣಿ ಕಳೆದುಕೊಂಡಿದ್ದು, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಧೂಳಿಪಟವಾದ ಟಿಡಿಪಿ ಈಗ ಮರುಜೀವ ಪಡೆದುಕೊಂಡಿದ್ದು, ಅದರ ಅಭ್ಯರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
|