ಹೊಗೇನಕಲ್ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಕರ್ನಾಟಕದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರನ್ನು ಹೊಗೇನಕಲ್ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು "ಕರ್ನಾಟಕದ ಜನತೆಯ ಹಿತಾಸಕ್ತಿ ನನಗೆ ಪ್ರಾಮುಖ್ಯ ಮತ್ತು ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಎಲ್ಲಾಪ್ರಯತ್ನಗಳನ್ನು ಮಾಡಲಾಗುವುದು" ಎಂದು ನುಡಿದರು.
ಈ ವಿಚಾರದ ಕುರಿತು ನೀರಾವರಿ ಮತ್ತು ಕಾನೂನು ತಜ್ಞರ ಬಳಿ ಈಗಾಗಲೇ ಚರ್ಚಿಸಿರುವುದಾಗಿ ಹೇಳಿದ ಅವರು, ವಿಶ್ವಾಸ ಮತಯಾಚನೆಯ ತಕ್ಷಣವೇ ಈ ವಾರದಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ನುಡಿದರು.
ನೆಲ, ಜಲಸಂಪನ್ಮೂಲ, ಗಡಿ, ಭಾಷೆ ಮತ್ತು ಕರ್ನಾಟಕದ ಸಂಸ್ಕೃತಿಯ ರಕ್ಷಣೆ ಅತ್ಯಂತ ಪ್ರಮುಖವಾದುದು ಮತ್ತು ಈ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ರಾಜಿಗೆ ಅವಕಾಶವಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದರು.
ಈ ಕುರಿತು ನೀವು ಕರುಣಾನಿಧಿಯವರನ್ನು ಭೇಟಿಮಾಡುವಿರೇ ಎಂದು ಕೇಳಿದಾಗ, ತಾನು ಎಲ್ಲರನ್ನೂ ಭೇಟಿಮಾಡಲು ಬಯಸುವುದಾಗಿ ನುಡಿದರು.
ತಮಿಳ್ನಾಡಿನಲ್ಲಿರುವ ಹೊಗೇನಕಲ್‌ಗೆ ಮಾರ್ಚ್ 16ರಂದು ಭೇಟಿ ನೀಡಿದ್ದ ಯಡಿಯೂರಪ್ಪ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಈ ಯೋಜನೆಯ ಕುರಿತಂತೆ ಉಭಯ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಈ ಯೋಜನೆಯನ್ನು ತಮಿಳ್ನಾಡು ಮುಖ್ಯಮಂತ್ರಿ ತಡೆಹಿಡಿದಿದ್ದರು. ಕರ್ನಾಟಕದ ಗಡಿಯಲ್ಲಿರುವ ಜಿಲ್ಲೆಗಳಾದ ಕೃಷ್ಣಗಿರಿ ಮತ್ತು ಧರ್ಮಪುರಿಗಳಿಗೆ ಕುಡಿಯುವ ನೀರು ಒದಗಿಸಲು 1,334 ಕೋಟಿ ರೂಪಾಯಿಯ ಈ ಯೋಜನೆಯನ್ನು ತಮಿಳ್ನಾಡು ಉದ್ದೇಶಿಸಿದೆ.
|