ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನ್ನನುಭವಿಸಿರುವುದು ಪಕ್ಷಕ್ಕೆ ಆಗಿರುವ ಬಹು ದೊಡ್ಡ ಹಿನ್ನಡೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಸೋಲಿಗೆ ಕಾರಣವೇನು ಎಂಬುದನ್ನು ಪರಿಶೀಲನೆ ನಡೆಸಿ ಪಕ್ಷವನ್ನು ಮತ್ತೆ ಪುನರುಜ್ಜೀವನಗೊಳಿಸುದಾಗಿ ಹೇಳಿದ್ದಾರೆ.
ನಿಜಕ್ಕೂ ಈ ಸೋಲು ಪಕ್ಷಕ್ಕೆ ಆಗಿರುವ ಹಿನ್ನಡೆ ಎಂದು ಅವರು ಅಮೇಠಿ ಕ್ಷೇತ್ರಕ್ಕೆ ಒಂದು ದಿನದ ಭೇಟಿಗೆ ಆಗಮಿಸಿ ಹಿಂತಿರುಗುವ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ತಿಳಿಸಿದರು.
ಈ ಬಗ್ಗೆ ಹೆಚ್ಚಿಗೆ ಮಾತನಾಡಲು ನಿರಾಕರಿಸಿ ಅವರು, ಈ ಕುರಿತು ಮೊನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದ್ದು, ಸಮಿತಿ ಪರಿಶೀಲನೆ ನಡೆಸಿದ 15ದಿನಗಳ ಬಳಿಕ ಪಕ್ಷದ ವರಿಷ್ಠೆ ಸೋನಿಯಾಗಾಂಧಿ ಅವರಿಗೆ ವರದಿಯನ್ನು ಸಲ್ಲಿಸಲಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಪುನರುಜ್ಜೀವನಗೊಳಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಶನಿವಾರ ದೀರ್ಘ ಸಮಾಲೋಚನೆ ನಡೆಸಿತ್ತು.
ಆದರೆ ಕರ್ನಾಟಕದಲ್ಲಿ ಭಾರತೀಯ ಜನತಾಪಕ್ಷ ಭರ್ಜರಿ ವಿಜಯ ಸಾಧಿಸಿದೆ ಎಂಬ ಮಾತನ್ನು ತಿರಸ್ಕರಿಸಿರುವ ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ, ಬಿಜೆಪಿ ಕೇವಲ ಅಲ್ಪಮತಗಳ ಬಹುಮತ ಪಡೆದಿದೆ ಅಷ್ಟೇ ಎಂದು ಹೇಳಿದರು. ಇದು ಬಿಜೆಪಿಗೆ ದೊರೆತ ಬಹುಮತ ಅಲ್ಲ, ಆ ನಿಟ್ಟಿನಲ್ಲಿ ಕಾಂಗ್ರೆಸ್ ಇತರ ಪಕ್ಷಗಳಿಗಿಂತ 10-15ಸೀಟು ಹೆಚ್ಚಿನ ಸ್ಥಾನ ಪಡೆದಿರುವುದಾಗಿ ಅವರು ಸ್ಪಷ್ಟೀಕರಣ ನೀಡಿದರು.
|