ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯ ಪರಿಣಾಮದಿಂದ ಅನಿವಾರ್ಯವಾಗಿರುವ ಪೆಟ್ರೋಲಿಯಂ ಬೆಲೆ ಏರಿಕೆ ಕುರಿತು, ನಿರ್ಧಾರ ಕೈಗೊಳ್ಳಲು ನಾಳೆ ಸಂಪುಟ ಸಭೆ ನಡೆಯಲಿದೆ.
"ನಾವು ಇನ್ನೂ ಆ ಕುರಿತು ಚರ್ಚಿಸುತ್ತಿದ್ದೇವೆ ಮತ್ತು ಬುಧವಾರ ಸಂಪುಟ ಸಭೆ ನಿಗದಿಯಾಗಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಅವರು ಮಂಗಳವಾರ ಔದ್ಯಮಿಕ ಕಾರ್ಯಕ್ರಮ ಒಂದರ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಆದರೆ ಸಂಪುಟ ಕಾರ್ಯಸೂಚಿಯ ಕುರಿತು ಮತ್ತಷ್ಟು ವಿವರಣೆ ನೀಡಲು ಸಚಿವರು ನಿರಾಕರಿಸಿದರು.
ಪೆಟ್ರೋಲ್, ಡೀಸೆಲ್, ಮತ್ತು ಗೃಹಬಳಕೆಯ ಅನಿಲಗಳ ಬೆಲೆ ಏರಿಕೆ ಕುರಿತು ಇನ್ನೂ ಒಮ್ಮತ ಮೂಡಿಲ್ಲ. ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಪಿಎ)ಯು ಬುಧವಾರ ಮುಂಜಾನೆ ಸಭೆ ನಡೆಸಲಿದೆ. ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಒಮ್ಮತ ಮೂಡಿದಲ್ಲಿ ಬಳಿಕ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಸಭೆ ನಡೆಸಲಾಗುವುದು ಎಂದು ಸರಕಾರಿ ಮೂಲಗಳು ಹೇಳಿವೆ.
ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರವಷ್ಟೆ, ಪೆಟ್ರೋಲ್ ಬೆಲೆ ಏರಿಕೆಯ ಕಾಲ ಸನ್ನಿಹಿತವಾಗಿದೆ ಎಂಬ ಸೂಚನೆ ನೀಡಿದ್ದು, ಜಾಗತಿಕ ಬೆಲೆ ಏರಿಕೆಯಿಂದ ಗ್ರಾಹಕರನ್ನು ಸಂಪೂರ್ಣವಾಗಿ ರಕ್ಷಿಸಲಾಗದು ಎಂದು ಹೇಳಿದ್ದರು. ತೈಲ ಬೆಲೆ ಏರಿಕೆಯಿಂದಾಗಿ ಸರಕಾರಿ ಸ್ವಾಮ್ಯದ ತೈಲಸಂಸ್ಥೆಗಳು 2,24,040 ಕೋಟಿ ರೂಪಾಯಿಗಳಷ್ಟು ಕಂದಾಯ ಕೊರತೆಯನ್ನು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಹಿರಿಯ ಸಚಿವರು ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರಾದರೂ ಒಮ್ಮತಾಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಪೆಟ್ರೋಲಿಯಂ ಸಚಿವ ಮುರಳಿ ದೇವೊರ ಅವರು ಪೆಟ್ರೋಲ್‌ಗೆ ಲೀಟರೊಂದರ ರೂಪಾಯಿ 10 ಮತ್ತು ಡೀಸೆಲ್‌ಗೆ ರೂಪಾಯಿ ಐದು ಮತ್ತು ಅಡುಗೆ ಅನಿಲ ಸಿಲಿಂಡರ್ ಒಂದಕ್ಕೆ ರೂಪಾಯಿ 50 ಏರಿಸುವ ಸಲಹೆ ನೀಡಿದ್ದು, ಸಂಪುಟದ ಪರಿಗಣನೆಯ ನಿರೀಕ್ಷೆಯಲ್ಲಿದ್ದಾರೆ. ಅದಾಗ್ಯೂ, ಪೆಟ್ರೋಲ್‌ಗೆ ರೂ.3, 5 ಅಥವಾ 7, ಡೀಸೆಲ್‌ಗೆ ರೂ. 2, 3, ಅಥವಾ 4 ಮತ್ತು 14.2ಕೆ.ಜಿ ಅಡುಗೆ ಅನಿಲ ಸಿಲಿಂಡರ್‌ಗೆ ರೂಪಾಯಿ 20 ಏರಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
|