ಕೋಲ್ಕತಾದ ಬುರ್ರಾಬಜಾರಿನಲ್ಲಿ ಐದು ತಿಂಗಳ ಹಿಂದೆ ಸಂಭವಿಸಿದ್ದ ಭಾರೀ ಬೆಂಕಿ ಅಪಘಾತ ಮನಸ್ಸಿನಿಂದ ಮಾಸುವ ಮುನ್ನವೇ, ಮತ್ತೆ ಅಂತಹುದೇ ಆಕಸ್ಮಿಕ ಸಂಭವಿಸಿದೆ. ಕೇವಲ ಐದು ತಿಂಗಳ ಹಿಂದೆ ಇದೇ ಬೀದಿಯಲ್ಲಿ ಹತ್ತಿಕೊಂಡಿದ್ದ ಬೆಂಕಿಯಿಂದಾಗಿ ನಂದರಾಮ್ ಮಾರುಕಟ್ಟೆ ಉರಿದು ಭಸ್ಮವಾಗಿತ್ತು.
ಮೆಹ್ತಾ ಕಟ್ಟಡದಲ್ಲಿರುವ ಔಷಧಿ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ಬಳಿಕ ಮಿಕ್ಕೆಡೆಗೆ ಪಸರಿಸಿತು ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ. ಬೆಂಕಿ ನಂದಿಸಲು 15 ಫೈರ್ ಇಂಜಿನ್‌ಗಳು ಪ್ರಯತ್ನಿಸುತ್ತಿವೆ.
ಧಗಧಗ ಉರಿಯುತ್ತಿರುವ ಬೆಂಕಿ ನಂದಿಸಲು ಕಷ್ಟವಾಗಿರುವ ಹಿನ್ನೆಲೆಯಲ್ಲಿ, ಬುರುಗು ಬಳಕೆಯ ವ್ಯವಸ್ಥೆಗೆ ಮುಂದಾಗಿರುವುದಾಗಿ ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
"ಕೆಲವರು ಕಟ್ಟಡದೊಳಕ್ಕೆ ಸಿಲುಕಿದರೂ ಸಿಲುಕಿರ ಬಹುದು, ಆದರೆ ಈ ಕುರಿತು ಖಚಿತವಿಲ್ಲ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ವರ್ಷದ ಜನವರಿ 12ರಂದು ಬುರ್ರಾಬಜಾರಿನ ಕಾಸಿರಾಂ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂದಾರಾಮ್ ಮಾರುಕಟ್ಟೆ ಸಂಪೂರ್ಣ ಉರಿದಿತ್ತು. ಈ ವೇಳೆ ಸುಮಾರು 500 ಕೋಟಿ ರೂಪಾಯಿ ನಷ್ಟವಾಗಿತ್ತು.
ಕಳೆದ ಐದು ತಿಂಗಳಲ್ಲಿ ಕೊಲ್ಕತಾ ನಗರವು ಸುಮಾರು 12 ಅಪಘಾತಗಳನ್ನು ಕಂಡಿದ್ದು 13 ಮಂದಿ ಸಾವಿಗೀಡಾಗಿದ್ದರು.
|