ಕರ್ನಾಟಕದ ಪಾಲಿನ ನಾಲ್ಕು ಸೇರಿದಂತೆ, ಒಟ್ಟು ಎಂಟು ರಾಜ್ಯಸಭಾ ಸ್ಥಾನಗಳಿಗೆ ಜೂನ್ 26ರಂದು ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಕಾಂಗ್ರೆಸ್‌ನ ಜನಾರ್ದನ ಪೂಜಾರಿ, ಪ್ರೇಮಾ ಕಾರ್ಯಪ್ಪ, ಎಂ.ವಿ.ರಾಜಶೇಖರನ್ ಹಾಗೂ ವಿಜಯಮಲ್ಯ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಚುನಾವಣೆ ಅವಶ್ಯಕವಾಗಿದೆ.
ರಾಜ್ಯದಲ್ಲಿ ಚುನಾಯಿತ ಸರಕಾರ ಇಲ್ಲದ ಕಾರಣ ಈ ಸ್ಥಾನಗಳಿಗೆ ಈ ಹಿಂದೆ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಬಿಹಾರ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ ಹಾಗೂ ಮಿಜೋರಾಂನ ತಲಾ ಒಂದು ಸ್ಥಾನಕ್ಕೂ ಅದೇ ದಿನ ಚುನಾವಣೆ ನಡೆಯಲಿದೆ.
ಬಿಹಾರದ ಬಿಜೆಪಿ ಸದಸ್ಯ ಜೈ ನಾರಾಯಣ್ ಪ್ರಸಾದ್ ನಿಶಾದ್, ನಾಗಾಲ್ಯಾಂಡಿನ ಟಿ.ಆರ್ಯಝೆಲಿಯಾಂಗ್, ಪಶ್ಚಿಮ ಬಂಗಾಳದ ಬರುನ್ ಮುಖರ್ಜಿ ಅವರುಗಳು ರಾಜೀನಾಮೆ ನೀಡಿರುವ ಕಾರಣ ಸ್ಥಾನ ತೆರವಾಗಿದೆ. ಮಿಜೊರಾಂನ ಸದಸ್ಯ ಲಾಲ್‌ಮಿಂಗ್ಲಿಯಾನ ಅವರು ಜೂ.18ರಂದು ನಿವೃತ್ತಲಾಗಲಿರುವ ಕಾರಣ ಆ ಸ್ಥಾನ ತೆರವಾಗಲಿದೆ ಎಂದು ಆಯೋಗ ತಿಳಿಸಿದೆ.
ಅದೇ ದಿನದಂದು ಕರ್ನಾಟಕ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಮತ್ತು ಆಂಧ್ರಪ್ರದೇಶದ ಒಂದು ಸ್ಥಾನಕ್ಕೂ ಅದೇ ದಿನ ಉಪಚುನಾವಣೆ ನಡೆಸುವುದಾಗಿ ಆಯೋಗ ಹೇಳಿದೆ.
ನಿಗದಿಯಂತೆ ಜೂನ್ 9ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು ಮತ್ತು ಜೂನ್ 16 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ ಆಗಿರುತ್ತದೆ. ಜೂ.19 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದೆ.
ಚುನಾವಣೆಯ ಬಳಿಕ, ಅದೇ ದಿನದಂದು ಮತಎಣಿಕೆ ನಡೆಯಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
|