ಕರ್ನಾಟಕ ಮತ್ತು ಗುಜರಾತಿನ ವಿಧಾನಸಭಾ ಚುನಾವಣೆಗಳ ತೀವ್ರಮುಖಭಂಗವೂ ಸೇರಿದಂತೆ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಉದ್ದಕ್ಕೂ ಸೋಲುತ್ತಲೇ ಹೋಗಿರುವ ಹಿನ್ನೆಲೆಯಲ್ಲಿ ಪಕ್ಷದ ಪುನಶ್ಚೇತನಕ್ಕಾಗಿ ಸಲಹೆಗಳನ್ನು ನೀಡಲು, ರಕ್ಷಣಾ ಸಚಿವ ಎ.ಕೆ.ಆಂಟನಿ ನೇತೃತ್ವದ ಏಳು ಮಂದಿಯ ಉನ್ನತ ಸಮಿತಿಯೊಂದನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ರೂಪಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕೇಂದ್ರ ಸಚಿವರುಗಳಾದ ಪಿ.ಆರ್.ದಾಸ್‌ಮುನ್ಷಿ, ಮಣಿಶಂಕರ್ ಆಯ್ಯರ್, ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್, ಮುಕುಲ್ ವಾಸ್ನಿಕ್ ಮತ್ತು ಊರ್ಮಿಳಾ ಸಿಂಗ್ ಅವರುಗಳು ಈ ಸಮೂಹದ ಇತರ ಸದಸ್ಯರಾಗಿದ್ದಾರೆ.
ಸಮೂಹವು 15 ದಿನಗಳೊಳಗಾಗಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ವರದಿ ಸಲ್ಲಿಸಬೇಕೆಂದು ಹೇಳಲಾಗಿದೆ. ಪಕ್ಷದ ಬಲವರ್ಧನೆಗೆ ಸಲಹೆಗಳನ್ನು ನೀಡಲು ಸಮಿತಿಯನ್ನು ಸ್ಥಾಪಿಸಲು ಮೇ 31ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ನಿರ್ಧರಿಸಿತ್ತು.
ಕರ್ನಾಟಕ ಚುನಾವಣೆಯಲ್ಲಿನ ಹೀನಾಯ ಸೋಲಿನ ಒಂದು ವಾರದ ಬಳಿಕದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚುನಾವಣೆಯ ತಾತ್ಕಾಲಿಕ ಸೋಲಿನಿಂದಾಗಿ ಪಕ್ಷವು ಸೂಕ್ತವಾದ ಪಾಠವನ್ನು ರೂಪಿಸಲು ಸಾಧ್ಯವಿದೆ ಮತ್ತು ಮುಂಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪಕ್ಷವನ್ನು ಪುನಶ್ಚೇತನಗೊಳಿಸುವ ಸಾಮರ್ಥ್ಯ ಪಕ್ಷಕ್ಕಿದೆ ಎಂದು ಕಾರ್ಯಕಾರಿಣಿ ಸಭೆಯಲ್ಲಿ ಹೇಳಲಾಗಿದೆ.
ಈ ವರ್ಷಗಳಲ್ಲಿ ಸರಣಿಯೋಪಾದಿಯಲ್ಲಿ ವಿಧಾನಸಭಾ ಚುನಾವಣೆಗಳು ಎದುರಾಗಲಿವೆ ಮತ್ತು ಮುಂದಿನ ವರ್ಷ ಲೋಕಸಭಾ ಚುನಾವಣೆಗಳೂ ನಡೆಯಲಿವೆ.
ಕಾಂಗ್ರೆಸ್ 2004ರಲ್ಲಿ ಅಧಿಕಾರಕ್ಕೆ ಬಂದಬಳಿಕ 13 ರಾಜ್ಯಗಳಲ್ಲಿ ಸೋಲನುಭವಿಸಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ, ಏಕಭಾವದಿಂದ ಮತ್ತು ಉತ್ತೇಜಿತ ತಂಡದಂತೆ ಕಾರ್ಯನಿರ್ವಹಿಸಿದಲ್ಲಿ ಮುಂದಿನ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಸಾಧ್ಯ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಭಿಪ್ರಾಯಿಸಿದೆ.
|