ಇಂಧೋರ್: ಗುಜ್ಜಾರ ಸಮುದಾಯವನ್ನು ಪರಿಶಿಷ್ಟ ಪಂಗಡವಾಗಿ ಪರಿಗಣಿಸಿ ಮೀಸಲಾತಿ ನೀಡುವುದಾಗಿ ಪಕ್ಷವಾಗಲಿ ಅಥವಾ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಅವರಾಗಲಿ ಎಂದಿಗೂ ಭರವಸೆ ನೀಡಿಲ್ಲ ಎಂದು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ಅಧ್ಯಕ್ಷೆ ಕಿರಣ್ ಮಹೇಶ್ವರಿ ಬುಧವಾರ ಇಲ್ಲಿ ಹೇಳಿದ್ದಾರೆ.
ಇದನ್ನು ಚುನಾವಣಾ ಪ್ರಣಾಳಿಕೆಯಲ್ಲೂ ಪ್ರಸ್ತಾಪಿಸಿಲ್ಲ. ಇದು ಹಾದಿ ತಪ್ಪಿಸುವ ವದಂತಿ ಮತ್ತು ಕೇಂದ್ರವು ಬೆಂಕಿಗೆ ತುಪ್ಪ ಸುರಿಯುವ ಪಾತ್ರ ವಹಿಸುತ್ತಿದೆ ಎಂದು ಹೇಳಿದ್ದಾರೆ. ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಿಜೆಪಿಯು ಬದ್ಧವಾಗಿದೆ ಎಂದು ನುಡಿದ ಮಹೇಶ್ವರಿ ಗುಜ್ಜಾರ್ ಸಮುದಾಯವು ಹಠಮಾರಿ ಧೋರಣೆ ತಳೆಯುತ್ತದೆ, ಚೆಂಡು ಇದೀಗ ಸಂಪೂರ್ಣವಾಗಿ ಕೇಂದ್ರದ ಅಂಗಳದಲ್ಲಿದೆ ಎಂದು ನುಡಿದರು.
ಕಾಂಗ್ರೆಸ್ ನಾಯಕರಾದ ಸಚಿನ್ ಪೈಲಟ್ ಮತ್ತು ಅವತಾರ್ ಸಿಂಗ್ ಬಂದಾನ ಅವರುಗಳು ಗುಜ್ಜಾರರನ್ನು ಬೆಂಬಲಿಸುತ್ತಿದ್ದಾರೆ. ಗುಜ್ಜಾರರಿಗೆ ಪರಿಶಿಷ್ಟ ಪಂಡಗದ ಸ್ಥಾನಮಾನ ನೀಡಬೇಕೆಂಬುದಾಗಿ ಎಂದಿಗೂ ಈ ನಾಯಕರು ಬೇಡಿಕೆ ಸಲ್ಲಿಸಿದ್ದಿಲ್ಲ ಎಂದವರು ಆಪಾದಿಸಿದರು.
ಮಹಿಳಾ ಮೋರ್ಚದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಕಿರಣ್ ಮಹೇಶ್ವರಿ ಇಲ್ಲಿಗೆ ಆಗಮಿಸಿದ್ದರು.
|