ನವದೆಹಲಿ: ಇಂಧನ ಬೆಲೆಗಳಲ್ಲಿ ವಿಪರೀತ ಏರಿಕೆ ಮಾಡಿರುವ ಸರಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಎಪಕ್ಷಗಳು, ಜನಸಾಮಾನ್ಯನ ಮೇಲೆ ಹೇರಲಾಗಿರುವ ಈ 'ಅಸಮರ್ಥನೀಯ ಹೊರೆ'ಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮುಂದಾಗಿವೆ.
ಕೇಂದ್ರದ ಯುಪಿಎ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿರುವ ನಾಲ್ಕು ಎಡಪಕ್ಷಗಳು, ತಮ್ಮ ಪಕ್ಷ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳ, ಕೇರಳ ಮತ್ತು ತ್ರಿಪುರಾಗಳಲ್ಲಿ ಗುರುವಾರ 12 ಗಂಟೆಗಳ ಬಂದ್‌ಗೆ ಕರೆ ನೀಡಿವೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆಏರಿಕೆಯು ಜನರ ಮೇಲಿನ ಹಲ್ಲೆ ಎಂದು ಜರೆದಿರುವ ವಾಮಪಂಥೀಯರು ಸರಕಾರವು ಈ ನಿರ್ಧಾರವನ್ನು ಹಿಂತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.
"ಯುಪಿಎ ತನ್ನ ನಿರ್ಧಾರವನ್ನು ಮರುವಿಮರ್ಷೆ ಮಾಡಬೇಕು ಎಂದು ಎಡಪಕ್ಷಗಳು ಒತ್ತಾಯಿಸುತ್ತವೆ" ಎಂಬುದಾಗಿ ಎಡಪಕ್ಷಗಳ ನಾಯಕರಾದ ಪ್ರಕಾಶ್ ಕಾರಟ್(ಸಿಪಿಐಎಂ), ಎ.ಬಿ.ಬರ್ಧನ್(ಸಿಪಿಐ), ದೇವವ್ರತ ವಿಶ್ವಾಸ್(ಫಾರ್ವರ್ಡ್ ಬ್ಲಾಕ್) ಮತ್ತು ಟಿ.ಜೆ.ಚಂದ್ರಚೂಡನ್(ಆರ್ಎಸ್‌ಪಿ) ಅವರುಗಳು ನೀಡಿರುವ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ತಮಿಳ್ನಾಡು ಬಂದ್ ಎಡಪಕ್ಷಗಳು ಪೆಟ್ರೋಲಿಯಂ ಬೆಲೆ ಏರಿಸಿ ಜೂನ್ ಆರರ ಶುಕ್ರವಾರ ತಮಿಳ್ನಾಡು ಬಂದ್‌ಗೆ ಕರೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಟೀಕೆ ಯುಪಿಎ ಸರಕಾರದ ನಿರ್ಧಾರವನ್ನು ಪ್ರತಿಭಟಿಸಿ ತೃಣಮೂಲ ಕಾಂಗ್ರೆಸ್ ಸಹ ಪಶ್ಚಿಮಬಂಗಾಳ ಬಂದ್‌ಗೆ ಕರೆನೀಡಿದೆ. ಎಡಪಕ್ಷಗಳು ಗುರುವಾರ ಮುಷ್ಕರಕ್ಕೆ ಮುಂದಾಗಿದ್ದರೆ, ತೃಣಮೂಲ ಕಾಂಗ್ರೆಸ್ ಶುಕ್ರವಾರ ನಸುಕಿನಿಂದ ಮುಸ್ಸಂಜೆಯ ತನಕ ಬಂದ್ ನಡೆಸಲಿದೆ.
ಇಂಧನ ಬೆಲೆ ಏರಿಕೆಯು 'ದುರದೃಷ್ಟಕರ ಮತ್ತು ಹಿಂದೆಂದೂಕಾಣದ ಮಾದರಿಯದ್ದು' ಎಂದು ತೃಣಮೂಲ ಕಾಂಗ್ರೆಸ್ ಬಣ್ಣಿಸಿದೆ.
ಎಡಪಕ್ಷಗಳ ಬೆಂಬಲದಿಂದಾಗಿ ಯುಪಿಎ ಸರಕಾರ ಉಸಿರಾಡುತ್ತಿರುವಾಗ, ಎಡಪಕ್ಷಗಳು ಬಂದ್ ನಡೆಸುವ ಔಚಿತ್ಯವೇನು ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. "ಒಂದೆಡೆ ಎಡಪಕ್ಷಗಳು ಕೇಂದ್ರ ಸರಕಾರವನ್ನು ಬೆಂಬಲಿಸುತ್ತಿವೆ; ಅದೇ ವೇಳೆಗೆ ಸರಕಾರವು ಇಂತಹ ನಿರ್ಧಾರವನ್ನು ಕೈಗೊಳ್ಳಲು ಅನುಕೂಲ ಮಾಡಿಕೊಡುತ್ತಿವೆ. ಯಾಕಿಂತಹ ಕೀಳುಮಟ್ಟದ ನಾಟಕ" ಎಂದು ಪ್ರಶ್ನಿಸಿರುವ ಬ್ಯಾನರ್ಜಿ ಎಡಪಕ್ಷಗಳ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ.
ಅಗತ್ಯವಸ್ತುಗಳ ಅಸಹಜ ಬೆಲೆ ಏರಿಕೆಯನ್ನು ತಾಳಲಾರದೆ ಜನಸಾಮಾನ್ಯರು ತತ್ತರಿಸುತ್ತಿರುವಾಗ ಇದು ಇನ್ನೊಂದು ಹೊರೆ ಎಂದು ಅವರು ಕೇಂದ್ರದ ಕ್ರಮವನ್ನು ದೂರಿದ್ದಾರೆ.
|