ಸರ್ಕಾರ ವಿಧಿಸಿದ್ದ ಗಡುವುರೇಖೆ ಅಂತ್ಯಗೊಂಡ ಬಳಿಕವೂ ಕರ್ತವ್ಯಕ್ಕೆ ಹಾಜರಾಗದಿರುವ ಮುಷ್ಕರ ನಿರತ 129 ವೈದ್ಯರನ್ನು ಜಾರ್ಖಂಡ್ ಸರಕಾರ ವಜಾ ಮಾಡಿದೆ.
ಚಳುವಳಿ ನಿರತ ವೈದ್ಯರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಬುಧವಾರ ರಾತ್ರಿಯ ತನಕ ಗಡುವು ನೀಡಲಾಗಿತ್ತು ಎಂದು ಅಧಿಕೃತ ಮೂಲಗಳು ಹೇಳಿವೆ. ಮುಖ್ಯಮಂತ್ರಿ ಮಧು ಕೋಡಾ ಅವರ ಸಮ್ಮತಿಯ ಬಳಿಕ ಆರೋಗ್ಯ ಸಚಿವ ಭಾನು ಪ್ರತಾಪ್ ಸಾಹಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಕೆಲಸವನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸಿತ್ತಿದ್ದ ಸುಮಾರು 600 ವೈದ್ಯರು ಮುಷ್ಕರ ಹೂಡಿದ್ದರು. ಸರಕಾರವು ಇವರಿಗೆ ಕರ್ತವ್ಯಕ್ಕೆ ಹಾಜರಾಗಲು 48 ಗಂಟೆಗಳ ಗಡು ನೀಡಿದ್ದು ಇಲ್ಲವಾದರೆ ಸೇವೆಯಿಂದ ವಜಾ ಮಾಡುವುದಾಗಿ ಎಚ್ಚರಿಕೆ ನೀಡಿತ್ತು.
ಗಡುವು ಮುಗಿದ ಬಳಿಕ 200 ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದರು. ಮುಷ್ಕರ ನಿರತ ಇತರ ವೈದ್ಯರ ಪರಿಸ್ಥಿತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಮೂಲಗಳು ಈ ಕುರಿತು ಪ್ರಕ್ರಿಯೆ ಮುಂದುವರಿದಿದೆ ಎಂದು ಹೇಳಿವೆ.
|