ಇಂಡಿಯನ್ ಎಕ್ಸ್‌ಪ್ರೆಸ್ ಬಳಗದ ಮರಾಠಿ ಪತ್ರಿಕೆ ಲೋಕ್‌ಸತ್ತಾದ ಸಂಪಾದಕ ಕುಮಾಲ್ ಕೇತ್ಕರಲ್ ಅವರ ಮನೆ ಮೇಲೆ ಶಿವ ಸಂಗ್ರಾಮ್ ಸಂಗಾತನ್ ಸಂಘಟನೆಯ ಸದಸ್ಯರು ಗುರವಾರ ದಾಳಿ ನಡೆಸಿದ್ದಾರೆ.
ಕೇತ್ಕರ್ ಅವರು, ಮರಾಠ ದೊರೆ ಛತ್ರಪತಿ ಶಿವಾಜಿ ಪತ್ರಿಮೆ ಸ್ಥಾಪನೆ ಕುರಿತ ರಾಜ್ಯ ಸರಕಾರದ ಯೋಜನೆಯನ್ನು ಟೀಕಿಸಿರುವುದರಿಂದ ರೊಚ್ಚಿಗೆದ್ದ ಸದಸ್ಯರು ಪತ್ರಿಕೆಯ ಪ್ರತಿಗಳನ್ನು ಸುಟ್ಟುಹಾಕಿದ್ದಾರೆ.
ಸಂಪಾದಕರ ಮನೆ ಮೇಲೆ ಕಲ್ಲೆಸೆದ ಸಂಗಾತನ್ ಕಾರ್ಯಕರ್ತರು, ಮನೆಮೇಲೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು ಎಂದು ವರದಿ ತಿಳಿಸಿದೆ. ಪ್ರತಿಭಟನಾಕಾರರ ದಾಳಿಯಿಂದಾಗಿ ಕೇತ್ಕರ್ ಅವರ ಮನೆಯ ಕಿಟಿಕಿ ಗಾಜು ಪುಡಿಪುಡಿಯಾಗಿದೆ.
ಮುಂಜಾನೆ ಸುಮಾರು 10.30ರ ವೇಳೆಗೆ ಈ ದಾಳಿ ನಡೆಸಲಾಗಿದ್ದು, ಈವೇಳೆ ಮನೆಯೊಳಗೆ ಕೇತ್ಕರ್ ಮತ್ತು ಅವರ ಪತ್ನಿ ಇದ್ದರು. ಪ್ರತಿಭಟನಾಕಾರರ ದಾಳಿಯಿಂದ ಕಂಗೆಡದ ಕೇತ್ಕರ್ ಅವರು, ತನ್ನ ನಿಲುವಿಗೆ ಅಂಟಿಕೊಂಡಿದ್ದು, ಸರಕಾರವು ಅರಬ್ಬೀ ಸಮುದ್ರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸಿ ಹಣವನ್ನ್ಯಾಕೆ ಪೋಲುಮಾಡುತ್ತಿದೆ? ಬದಲಿಗೆ ಅದೇ ಹಣವನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಬಳಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಲೋಕ್‌ಸತ್ತಾ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ನಿರ್ಭೀತಿಯ ಪತ್ರಿಕೋದ್ಯಮ ನೀತಿಯನ್ನು ಹೊಂದಿದ್ದು ತಾವದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಏಳು ಮಂದಿ ಬಂಧನ ಕೇತ್ಕರ್ ಅವರ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳುಮಂದಿಯನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಹೇಳಿದ್ದಾರೆ.
ಏತನ್ಮಧ್ಯೆ, ಸಂಘಟನೆಯ ದಾಳಿಯನ್ನು ಅದರ ಅಧ್ಯಕ್ಷ ವಿನಾಯಕ್ ಮೇಟೆ ಸಮರ್ಥಿಸಿಕೊಂಡಿದ್ದಾರೆ.
ರಾಜ್ಯಸರಕಾರವು ಅರಬ್ಬೀ ಸಮುದ್ರದಲ್ಲಿ 309 ಅಡಿ ಎತ್ತರದ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸಲು ಯೋಜಿಸಿದೆ.
|