ಸಿಕಂದರಾದಲ್ಲಿ ಮೇ 24ರಂದು ಮುಷ್ಕರ ನಿರತವಾಗಿದ್ದ ವೇಳೆ ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಹತರಾದ 20 ಮಂದಿಯ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಗುಜ್ಜಾರರೊಳಗೆಯೆ ಭಿನ್ನಾಭಿಪ್ರಾಯ ತಲೆದೋರಿದೆ. ಇದರಿಂದಾಗಿ ಹತರಾದವರ ಅಂತ್ಯಕ್ರಿಯೆಯಲ್ಲಿ ಇನ್ನಷ್ಟು ವಿಳಂಬ ಉಂಟಾಗಿದೆ.
ಮೃತರಾದವರ ಕುಟಂಬದ ಸದಸ್ಯರು ಮೃತದೇಹಗಳನ್ನು ತಮ್ಮ ಹಳ್ಳಿಗೆ ಒಯ್ಯಲು ಬಯಸಿದರೆ, ಗುಜ್ಜಾರ್ ಸಮಾಜ್ ಸಂಘಟನೆಯು ಸಾಮೂಹಿಕ ಅಂತ್ಯಕ್ರಿಯೆ ನಡೆಸಲು ಇಚ್ಛಿಸಿದೆ ಎಂದು ದೌಸಾದ ಜಿಲ್ಲಾಧಿಕಾರಿ ಆರ್.ಎಸ್.ಯಾದವ್ ಹೇಳಿದ್ದಾರೆ.
ಪ್ರತಿಭಟನಾ ನಿರತರು ತಮ್ಮ ಉಗ್ರ ಚಳುವಳಿಯನ್ನು ಮುಂದುವರಿಸಿದ್ದು, ದೌಸಾದಲ್ಲಿ ನೀರುಸರಬರಾಜು ಕೊಳವೆಗಳನ್ನು ಒಡೆದು ಹಾಕಿದ್ದಾರೆ. ಆದರೆ ಪ್ರದೇಶಕ್ಕೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಯಿತು ಎಂದು ಯಾದವ್ ಹೇಳಿದ್ದಾರೆ.
ಬುಧವಾರ ನಡೆದ ಮೇ 23ರಂದು ನಡೆದ ಗೋಲಿಬಾರಿನಲ್ಲಿ ಹತರಾದ 16 ಮಂದಿಯ ಅಂತ್ಯಕ್ರಿಯೆಯ ವೇಳೆಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ.
ಏತನ್ಮಧ್ಯೆ, ಮಾತುಕತೆಗೆ ಬರುವಂತೆ ಆಹ್ವಾನಿಸಿ ಗುಜ್ಜಾರ್ ನಾಯಕ ಕಿರೋರಿ ಸಿಂಗ್ ಭೈಂಸ್ಲಾ ಅವರಿಗೆ ಸರಕಾರ ನೀಡಿರುವ ಆಹ್ವಾನ ಪತ್ರವನ್ನು ರಾಜಸ್ಥಾನ ಸರಕಾರದ ವಿಶೇಷ ರಾಯಭಾರಿ ಎಸ್.ಎನ್.ತನ್ವಿ ಮೂಲಕ ಪಿಲು-ಕಾ-ಪುರದಲ್ಲಿ ಬಟವಾಡೆ ಮಾಡಲಾಗಿದೆ ಎಂದು ಪಿಡಬ್ಲ್ಯುಡಿ ಸಚಿವ ರಾಜೇಂದ್ರ ರಾಥೋಡ್ ಹೇಳಿದ್ದಾರೆ.
ಆದರೆ, ಸರಕಾರ ಇದುವರೆಗೂ ಭೈಂಸ್ಲಾ ಅವರಿಂದ ಯಾವುದೇ ಉತ್ತರ ಪಡೆದಿಲ್ಲ.
|