ಹಣದುಬ್ಬರವು ಮತ್ತೆ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರಮುಖ ವಿರೋಧಪಕ್ಷವಾಗಿರುವ ಬಿಜೆಪಿ ಒತ್ತಾಯಸಿದೆ.
"ಆರ್ಥಿಕ ಪ್ರಧಾನ ಮಂತ್ರಿಯಾಗಿರುವ ನೀವು ಆರ್ಥಿಕತೆಯನ್ನು ನಿರ್ವಹಿಸಲು ಸಾಧ್ಯವಿಲ್ಲ ಮತ್ತು ಭಾರತವನ್ನು ನಿರ್ವಹಿಸಲು ಸಾಧ್ಯವಿಲ್ಲ" ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ, ಹಣದುಬ್ಬರವು ಹೊಸಎತ್ತರಕ್ಕೇರಿದೆ. ಅವರು ಪಿ.ವಿ.ನರಸಿಂಹ ರಾವ್ ಆಡಳಿತಾವಧಿಯಲ್ಲಿ ಹಣಕಾಸು ಸಚಿವರಾಗಿದ್ದಾಗಲೂ ಇದೇ ಪರಿಸ್ಥಿತಿ ಉದ್ಭವಿಸಿತ್ತು. ಇದೀಗ ಅವರು ಪ್ರಧಾನಿಯಾಗಿರುವಾಗಲೂ ಅದೇ ಪರಿಸ್ಥಿತಿ ಮರುಕಳಿಸಿದೆ ಎಂದು ಪ್ರಸಾದ್ ಆರೋಪಿಸಿದ್ದಾರೆ.
"ಹಣದುಬ್ಬರ ನಿಯಂತ್ರಣಕ್ಕೆ ಸರಕಾರವು ಇತ್ತೀಚೆಗೆ ಕೈಗೊಂಡಿರುವ ಕ್ರಮಗಳು ಎರಡು ವಾರದೊಳಗಾಗಿ ಪರಿಣಾಮ ಬೀರಲಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಮಾರ್ಚ್ 31ರಂದು ಹೇಳಿದ್ದರು. ಆದರೆ ಇದೀಗ ಎಂಟು ವಾರಗಳೇ ಕಳೆದಿದ್ದರೂ, ದಿನದಿಂದ ದಿನಕ್ಕೆ ಜನಸಾಮಾನ್ಯನ ಬವಣೆ ಏರುತ್ತಿದೆ" ಎಂದು ಅವರು ದೂಷಿಸಿದರು.
ಈ ವರ್ಷದ ಉತ್ತಮ ಬೆಳೆಯೂ ಪರಿಸ್ಥಿತಿಯನ್ನು ನಿರ್ವಹಿಸಲು ವಿಫಲವಾಗಿದೆ. ಕೃಷಿ ಸಚಿವ ಶರದ್ ಪವಾರ್ ಅವರು 2.1ಲಕ್ಷ ಟನ್ ಬಂಪರ್ ಬೆಳೆ ಪಡೆದಿದ್ದೇವೆ ಎಂದು ಹೇಳಿದ್ದಾರೆ. ಆದರೆ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಇದು ಯಾವುದೇ ಉಪಶಮನ ನೀಡಿಲ್ಲ.
ಇದೆಲ್ಲವೂ ಯುಪಿಎ ಸರಕಾರದ ಅಸಮರ್ಪಕ ಆರ್ಥಿಕತೆ ನಿರ್ವಹಣೆಯ ಪ್ರತಿಫಲ ಎಂದು ಪ್ರಸಾದ್ ಹೇಳಿದ್ದಾರೆ.
|