ತೈಲಬೆಲೆ ಏರಿಕೆಯಿಂದ ರಾಜ್ಯಗಳು ಗಳಿಸುವ ಆದಾಯ ತೆರಿಗೆಯನ್ನು ಬಿಟ್ಟುಕೊಡಲು ಸಿದ್ಧವಿದ್ದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅನುಕ್ರಮವಾಗಿ ರೂ.ಒಂದು ಮತ್ತು 50 ಪೈಸೆ ಕಡಿತವಾಗಲಿದೆ. ಪೆಟ್ರೋಲ್ ಬೆಲೆ ಏರಿಕೆ ಬಳಿಕ ಆಂಧ್ರಪ್ರದೇಶ, ಕೇರಳ, ಕರ್ನಾಟಕ, ಪಂಜಾಬ್ ಉತ್ತರ ಪ್ರದೇಶದಂತಹ ರಾಜ್ಯಗಳು, ತಮ್ಮ ರಾಜ್ಯದಲ್ಲಿ ಮಾರಾಟವಾಗುವ ಪ್ರತೀಲೀಟರ್ ಪೆಟ್ರೋಲ್‌ಗೆ ಒಂದು ರೂಪಾಯಿಗಿಂತ ಅಧಿಕ ಮತ್ತು ಡೀಸೆಲ್‌ಗೆ 50 ಪೈಸೆ ಲಾಭಗಳಿಸುತ್ತಿವೆ.
ಪೆಟ್ರೋಲಿಯಂ ಸಚಿವ ಮುರಳಿ ದೇವೊರ ಅವರು 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರಬರೆದಿದ್ದು, ಪೆಟ್ರೋಲ್ ಬೆಲೆಏರಿಕೆಯ ಪರಿಣಾಮ ಪಡೆಯುವ ಲಾಭವನ್ನು ಬಿಟ್ಟುಕೊಡುವಂತೆ ವಿನಂತಿಸಿದ್ದಾರೆ. "ಗ್ರಾಹಕರಿಗೆ ಗರಿಷ್ಠ ಉಪಶಮನ ನೀಡುವುದು ಕೇಂದ್ರ ಮತ್ತು ರಾಜ್ಯಸರಕಾರಗಳ ಕರ್ತವ್ಯ. ಕೇಂದ್ರ ಸರಕರಾವು 1,20,000 ಕೋಟಿ ರೂಪಾಯಿ ನೀಡುತ್ತಿರುವ ಸಂದರ್ಭದಲ್ಲಿ ಗ್ರಾಹಕರ ಹೊರೆಯನ್ನು ಹಂಚಿಕೊಳ್ಳುವಲ್ಲಿ ರಾಜ್ಯಸರಕಾರಗಳೂ ತಮ್ಮ ಕೊಡುಗೆ ನೀಡುವಲ್ಲಿ ಹಿಂದೆ ಬೀಳವು" ಎಂಬ ಆಶಾವಾದವನ್ನು ಅವರು ತಮ್ಮ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.
ಆಂಧ್ರ ಪ್ರದೇಶವು ಪೆಟ್ರೋಲ್ ಮತ್ತು ಡೀಸೆಲ್‌ಗಳಿಗೆ ಗರಿಷ್ಠ ಮಾರಟ ತೆರಿಗೆ ವಿಧಿಸುತ್ತಿದ್ದು, ಹೊಸ ಬೆಲೆಯಿಂದಾಗಿ ರೂ.1.38 ಪೆಟ್ರೋಲ್ ಬೆಲೆಯಲ್ಲಿ ಮತ್ತು ಡೀಸೆಲ್‌ಗೆ 59 ಪೈಸೆ ಹೆಚ್ಚುವರಿ ಗಳಿಕೆ ಮಾಡಲಿದೆ. ಅಂತೆಯೇ ಮುಂಬೈ ರೂ.1.17 ಮಚ್ಚು 75ಪೈಸೆ, ಅಕಾಲಿದಳ-ಬಿಜೆಪಿ ಆಡಳಿತದ ಪಂಜಾಬ್ ಪೆಟ್ರೋಲ್ ಮಾರಟದಿಂದ ಹೆಚ್ಚುವರಿ ರೂ.1.16 ಪಡೆಯಲಿದೆ.
ಇದುವರೆಗೆ ಪಶ್ಚಿಮಬಂಗಾಳ, ಬಿಹಾರ, ತಮಿಳ್ನಾಡುಗಳು ಮಾರಾಟ ತೆರಿಗೆ ಕಡಿತಗೊಳಿಸಿವೆ.
|