ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಆಗ್ರಹಿಸಿ ಸುಮಾರು ಹದಿನೈದು ದಿನಗಳಿಂದ ಹಿಂಸಾಚಾರದ ಪ್ರತಿಭಟನೆಯಲ್ಲಿ ತೊಡಗಿರುವ ಗುಜ್ಜಾರ್ ಸಮುದಾಯವು ಕೊನೆಗೂ ಸರಕಾರದೊಂದಿಗೆ ಮಾತುಕತೆಗೆ ಮುಂದಾಗಿದೆ. ಅವರು ಶನಿವಾರ ಅಪರಾಹ್ನ ಮಾತುಕತೆ ನಡೆಸಲಿದ್ದಾರೆಂದು ನಿರೀಕ್ಷಿಸಲಾಗಿದೆ.
ಗುಜ್ಜಾರರ ಹಿಂಸಾಚಾರದ ಪ್ರತಿಭಟನೆ ವೇಳೆಗೆ ಪೊಲೀಸರೊಂದಿಗೆ ಘರ್ಷಣೆಗಿಳಿದ ಕಾರಣ ನಡೆಸಿರುವ ಗೋಲೀಬಾರ್‌ನಲ್ಲಿ 37 ಮಂದಿ ಹತರಾಗಿದ್ದಾರೆ. ಇದೀಗ ಗುಜ್ಜಾರರು ಮಾತುಕತೆಗೆ ಮುಂದಾಗಿರುವಂತೆ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿರುವ ಸಮುದಾಯವು ರಾಜಸ್ಥಾನದ ಬಂಡಿಕಾಯ್‌ಯಲ್ಲಿ ನಡೆಸಿರುವ ತಡೆಯನ್ನು ಹಿಂತೆಗೆದುಕೊಂಡಿದ್ದಾರೆ.
ಪ್ರತಿಭಟನಾ ನಿರತರಾಗಿದ್ದ 43 ಗಂಡಸರು ಹಾಗೂ 25 ಮಹಿಳೆಯರನ್ನು ಬಂಧಿಸಲಾಗಿದೆ. ಒಂದೊಮ್ಮೆ ಶನಿವಾರದ ಮಾತುಕತೆಗಳು ವಿಫವಾದಲ್ಲಿ ಅವರು ಜೂ.10ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ.
ಏತನ್ಮಧ್ಯೆ, ರಾಜಧಾನಿ ದಿಲ್ಲಿಯಲ್ಲಿ ಗೃಹ ಸಚಿವ ಶಿವರಾಜ್ ಪಾಟೀಲ್ ರಾಷ್ಟ್ರೀಯ ಭದ್ರಾತಾ ಸಲಹೆಗಾರ ಎಂಕೆ ನಾರಾಯಣನ್ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ಗುಜ್ಜಾರ್‌ಗಾಗಿ ಎಸ್‌ಟಿ ಸ್ಥಾನಮಾನ ನೀಡುವಾಗಿನ ಪರ ಹಾಗೂ ವಿರೋಧಗಳ ಬಗ್ಗೆ ಚರ್ಚೆ ನಡೆಸಿದರು.
ಸರಕಾರದೊಂದಿಗೆ ಮಾತುಕತೆ ನಡೆಸುವ ಗುಜ್ಜಾರ್‌ನ ನಿರ್ಧಾರವನ್ನು ಗುಜ್ಜಾರ್‌ನ ಅಗ್ರ ನಾಯಕರ ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದು ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಕಿರೋರಿ ಸಿಂಗ್ ಬೈನ್‌ಸ್ಲಾ ವರದಿಗಾರರಿಗೆ ತಿಳಿಸಿದ್ದಾರೆ. ಮಾತುಕತೆಗೆ ಬರುವಂತೆ ರಾಜ್ಯ ಸರಕಾರ ಪ್ರತಿಭಟನಾಕಾರರಿಗೆ ಆಹ್ವಾನ ನೀಡಿದ ಒಂದು ದಿನದಲ್ಲೇ ನಡೆಸಿದ ಗುಜ್ಜಾರ್ ಮಹಾಪಂಚಾಯತ್ ಬಳಿಕ ಮಾತನಾಡಿದ ಅವರು, ಭರತ್ಪುರ್ ಜಿಲ್ಲೆಯ ಬಯಾನದಲ್ಲೇ ಮಾತುಕತೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
|