ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಎಡಪಕ್ಷಗಳು ನೀಡಿರುವ ಬಂದ್ ಕರೆಗೆ ತಮಿಳ್ನಾಡಿನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಹಾಗೂ ರೈಲುಗಳು ಎಂದಿನಂತೆ ಓಡಾಡುತ್ತಿವೆ.
ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸೂರಿನಲ್ಲಿ ರೈಲ್ ರೋಕೋ ನಡೆಸಲು ಯತ್ನಿಸಿದ್ದ 70 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಗರದ ಕೆಲವು ಭಾಗಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿವೆ. ಒಂದು ವರ್ಗದ ರಿಕ್ಷಾಚಾಲಕರು ಮುಷ್ಕರ ಬೆಂಬಲಿಸಿ ರಸ್ತೆಗಿಳಿದಿಲ್ಲ. ಅದಾಗ್ಯೂ, ಅಗತ್ಯವಸ್ತುಗಳ ಮಾರಾಟಕ್ಕೆ ಯಾವುದೇ ಅಡ್ಡಿಯುಂಟಾಗಲಿಲ್ಲ. ಕೆಲವು ಬೃಹತ್ ಚಿಲ್ಲರೆ ಮಾರಾಟ ಮಳಿಗೆಗಳೂ ತೆರೆದಿವೆ.
ಕೇಂದ್ರಸರಕಾರವು ಪೆಟ್ರೋಲ್‌ಗೆ ರೂ.5. ಡೀಸೆಲ್‌ಗೆ ರೂ.3 ಮತ್ತು ಅಡುಗೆ ಅನಿಲಕ್ಕೆ ರೂ.50 ಏರಿಸಿದ್ದು ಇದನ್ನು ಪ್ರತಿಭಟಿಸಿ ಸಿಪಿಐ, ಸಿಪಿಐ(ಎಂ) ಮತ್ತು ಇತರ ಎಡಪಕ್ಷಗಳು 12 ಗಂಟೆಗಳ ರಾಜ್ಯ ಬಂದ್‌ಗೆ ಕರೆ ನೀಡಿವೆ.
|