ಉತ್ತರ ಪ್ರದೇಶದ ಪೊಲೀಸ್ ಪೇದೆಯೊಬ್ಬನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟಿರುವ ಸಚಿವ ಜಮುನಾ ನಿಶಾದ್‌ರನ್ನು ಮುಖ್ಯಮಂತ್ರಿ ಮಾಯಾವತಿ ಅವರು ವಜಾ ಮಾಡಿದ್ದಾರೆ.
ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಸಚಿವರ ಬೆಂಬಲಿಗರು ಮತ್ತು ಪೊಲೀಸರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಪೊಲೀಸ್ ಪೇದೆಯೊಬ್ಬ ಮೃತಪಟ್ಟಿದ್ದು, ಸಚಿವರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಪ್ರಕರಣದ ಕುರಿತು ಮ್ಯಾಜಸ್ಟ್ರೀಟ್ ತನಿಖೆನ್ನೂ ಮಾಯಾವತಿ ಆದೇಶಿಸಿದ್ದಾರೆ. ಆರೋಪಿ ಸಚಿವರನ್ನು ತನ್ನ ನಿವಾಸಕ್ಕೆ ಮಾಯಾವತಿ ಕರೆಸಿದ್ದು ಈ ವೇಳೆ, ಸಚಿವರು ರಾಜೀನಾಮೆ ನೀಡಿದ್ದರು.
ಮಯಾವತಿ ಅವರು ಸಚಿವರ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಟಿ.ವಿ.ರಾಜೇಶ್ವರ್ ಅವರಿಗೆ ಸ್ವೀಕೃತಿಗಾಗಿ ಕಳುಹಿಸಿದ್ದಾರೆ. ಘರ್ಷಣೆಯಲ್ಲಿ ಮೃತನಾದ ಪೊಲೀಸ್ ಕುಟುಂಬಕ್ಕೆ ಉದ್ಯೋಗ ಭರವಸೆ ಹಾಗೂ 24 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಇದಲ್ಲದೆ, ಮೃತರ ಇಬ್ಬರು ಹೆಣ್ಣುಮಕ್ಕಳಿಗೆ ತಲಾ ಐದು ಲಕ್ಷ ರೂಪಾಯಿ ನಿರಕು ಠೇವಣಿಯನ್ನೂ ಸರಕಾರ ಒದಗಿಸಿದೆ.
ಪ್ರಕರಣ ಕುರಿತಂತೆ ದಾಖಲಿಸಲಾಗಿರುವ ಪ್ರಥಮ ಮಾಹಿತಿ ವರದಿಯಲ್ಲಿ ನಿಶಾದ್ ಹಾಗೂ ಅವರ 50 ಬೆಂಬಲಿಗರನ್ನು ಹೆಸರಿಸಲಾಗಿದೆ. ಇವರ ವಿರುದ್ಧ ಭಾರತೀಯ ಡಂಡ ಸಂಹಿತೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಕೊಲೆ ಹಾಗೂ ಇತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
|