ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತನ್ನ ಮರಣದಂಡನೆ ವಿಚಾರದ ಕುರಿತು ಕಟುವಾಗಿ ಪ್ರತಿಕ್ರಿಯಿಸಿರುವ ಸಂಸತ್ ಭವನ ದಾಳಿ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಅಫ್ಜಲ್ ಗುರು, ಕ್ಷಮಾದಾನ ಅರ್ಜಿಯ ಶೀಘ್ರ ವಿಲೇವಾರಿಯನ್ನು ಬಯಸಿದ್ದಾನೆ.
ಪ್ರಸ್ತುತ ಯುಪಿಎ ಸರಕಾರವು ಅನವಶ್ಯಕ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿರುವ ಗುರು, "ಭಾರತೀಯ ಜನತಾ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿಯವರಾಗಿದ್ದರೆ ಇಷ್ಟರಲ್ಲಿ ಒಂದಿಲ್ಲ ಒಂದು ನಿರ್ಣಯ ಕೈಗೊಳ್ಳುತ್ತಿದ್ದರು" ಎಂಬ ಹೇಳಿಕೆ ನೀಡಿದ್ದಾನೆ.
"ಯುಪಿಎ ಸರಕಾರವು ಯಾವುದಾದರೂ ಒಂದು ನಿರ್ಣಯಕ್ಕೆ ತಲುಪುವಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎರಡು ಬಾಯಿ ಇದ್ದು, ಅದು ಡಬಲ್ ಗೇಮ್ ಆಡುತ್ತಿದೆ" ಎಂಬ ಗಂಭೀರ ಆರೋಪವನ್ನು ಅಫ್ಜಲ್ ಮಾಡಿದ್ದಾನೆ.
ಸಂಸತ್ ಭವನದ ಮೇಲೆ 2001ರ ಡಿಸೆಂಬರ್ ತಿಂಗಳಲ್ಲಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣ ದಂಡನೆಗೀಡಾಗಿರುವ ಅಫ್ಜಲ್, ತಿಹಾರ್ ಜೈಲಿನ ರೂಂ ಸಂಖ್ಯೆ 3ರಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತನ್ನ ಬೇಗುದಿಯನ್ನು ಹೊರಹಾಕಿದ್ದಾನೆ.
"ಎಲ್.ಕೆ.ಆಡ್ವಾಣಿ ಭಾರತದ ಮುಂದಿನ ಪ್ರಧಾನಿಯಾಗಬೇಕು ಎಂದು ನಾನು ನಿಜವಾಗಿಯೂ ಇಚ್ಛಿಸುತ್ತೇನೆ. ಅವರು ಮಾತ್ರ ನನ್ನನ್ನು ಗಲ್ಲಿಗೇರಿಸುವ ನಿರ್ಧಾರ ಕೈಗೊಳ್ಳಲು ಸಾಧ್ಯ. ಆಗಲಾದರೂ ದಿನನಿತ್ಯ ಸಾಯುವುದರಿಂದ ಒಮ್ಮೆಗೆ ಮುಕ್ತಿ ದೊರೆತೀತು" ಎಂಬುದಾಗಿ ಅಫ್ಜಲ್ ಹೇಳಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2004ರಲ್ಲಿ ಅಫ್ಜಲ್ ಗುರು ದೋಷಿ ಎಂದು ತೀರ್ಮಾನಿಸಿದ್ದು, ನಂತರದ ವರ್ಷ ಮರಣ ದಂಡನೆ ವಿಧಿಸಿದೆ.
"ಜೈಲಿನಲ್ಲಿ ಜೀವನ ನರಕವಾಗಿದೆ. ನನ್ನ ಶಿಕ್ಷೆಯ ಕುರಿತು ತಕ್ಷಣ ತೀರ್ಮಾನ ಕೈಗೊಳ್ಳಲು ಕೇವಲ ಎರಡು ತಿಂಗಳ ಹಿಂದಷ್ಟೆ ನಾನು ಸರಕಾರವನ್ನು ವಿನಂತಿಸಿಕೊಂಡಿದ್ದೇನೆ. ನಾನು ಸತ್ತಂತೆ ಬದುಕಿರಲು ಇಚ್ಛಿಸುವುದಿಲ್ಲ" ಎಂದವನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ.
ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ಪ್ರಜೆ ಸರಬ್‌ಜಿತ್ ಮೇಲೆ ತನಗೆ ಅನುಕಂಪವಿದೆ ಎಂದು ಹೇಳಿರುವ ಅಫ್ಜಲ್, "ತನ್ನ ಪ್ರಕರಣವನ್ನು ಆತನ ಪ್ರಕರಣಕ್ಕೆ ಹೋಲಿಸುವಂತಿಲ್ಲ. ನನ್ನ ಹೋರಾಟವೇನಿದ್ದರೂ ಕಾಶ್ಮೀರ ಬಿಕ್ಕಟ್ಟಿಗೆ ಸಂಬಂಧಿಸಿದ್ದು. ನಾನೀಗ ಯಾವುದೇ ಕ್ಷಮೆಯನ್ನೂ ಯಾಚಿಸುತ್ತಿಲ್ಲ ಮತ್ತು ಸರಕಾರವು ನನ್ನ ಹಣೆಬರಹದ ಕುರಿತು ನಿರ್ಧಾರ ಕೈಗೊಳ್ಳುವ ಕುರಿತು ಆಕ್ಷೇಪವಿಲ್ಲ" ಎಂದು ಹೇಳಿದ್ದಾನೆ.
ಜೈಲಿನಲ್ಲಿರುವ ಅಫ್ಜಲ್, ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು ಬರೆದಿರುವ 'ಇಂಡಿಯಾ ವಿನ್ಸ್ ಫ್ರೀಡಂ' ಪುಸ್ತಕವನ್ನು ಓದುತ್ತಿದ್ದಾನೆ.
ಅಫ್ಜಲ್‌ನನ್ನು ಗಲ್ಲಿಗೇರಿಸಿದಲ್ಲಿ ಕಾಶ್ಮೀರದ ಶಾಂತಿ ಪ್ರಕ್ರಿಯೆಗೆ ಅಡಚಣೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಕಾಶ್ಮೀರದ ರಾಜಕೀಯ ಗುಂಪುಗಳು ಆತನಿಗೆ ಕ್ಷಮಾದಾನ ನೀಡಬೇಕು ಎಂದು ಒತ್ತಾಯಿಸುತ್ತಿವೆ. ಮಾನವ ಹಕ್ಕುಗಳ ಕಾರ್ಯಕರ್ತರೂ ಸಹ ಅಫ್ಜಲ್ ಗುರು ಪ್ರಕರಣದ ವಿಚಾರಣೆಯಲ್ಲಿ ದೋಷವಿದೆ ಎಂದು ಹೇಳಿದ್ದು, ಆತನಿಗೆ ಮರಣದಂಡನೆ ವಿಧಿಸದಂತೆ ಒತ್ತಾಯಿಸುತ್ತಿವೆ.
|