ಪರಿಶಿಷ್ಟ ಬುಡಕಟ್ಟು ಸ್ಥಾನಮಾನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಗುಜ್ಜಾರರ ಜತೆಗೆ ರಾಜಸ್ಥಾನ ಸರಕಾರದ ಮೊದಲ ಸುತ್ತಿನ ಮಾತುಕತೆ ಸೋಮವಾರ ಸುಖಾಂತ್ಯ ಕಂಡಿದ್ದು, ಮಂಗಳವಾರ ನಡೆಸಲುದ್ದೇಶಿಸಲಾಗಿದ್ದ ಭಾರತ ಬಂದ್ ಕರೆಯನ್ನು ಗುಜ್ಜಾರರು ಹಿಂತೆಗೆದುಕೊಂಡಿದ್ದಾರೆ ಮತ್ತು ಮುಂದಿನ ಸುತ್ತಿನ ಮಾತುಕತೆಯನ್ನು ಜೈಪುರದಲ್ಲಿ ನಡೆಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಸೋಮವಾರ ಸಂಜೆ ಮೂರುವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯ ಬಳಿಕ ಮಾತನಾಡಿದ ಗುಜ್ಜಾರರು, ಸಭೆಯು ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು ಎಂದು ಹೇಳಿದರು.
ವಸುಂಧರಾ ರಾಜೇ ಸರಕಾರದ ಇಬ್ಬರು ಸಚಿವರಾದ ಎಲ್.ಎನ್.ದಾವೆ ಮತ್ತು ಎಸ್.ಎಂ.ಜಾತ್ ಅವರೊಂದಿಗೆ 37 ಮಂದಿಯುಳ್ಳ ಗುಜ್ಜಾರ ನಿಯೋಗದ ನಡುವೆ ಬಯಾನದ ಸರಕಾರಿ ಶಾಲೆಯೊಂದರಲ್ಲಿ ಮಾತುಕತೆ ನಡೆಯಿತು.
ಎಲ್ಲಾ ಜಿಲ್ಲೆಗಳ ಗುಜ್ಜಾರರನ್ನೊಳಗೊಂಡ ನಿಯೋಗದಲ್ಲಿ ಪ್ರತಿಭಟನೆಯ ಮುಂದಾಳುತ್ವ ವಹಿಸಿದ್ದ ಕಿರೋರಿ ಸಿಂಗ್ ಬೈನ್ಸಲಾ ಅವರ ವೈದ್ಯ ವಿ.ಎಸ್.ಚೌಧುರಿ ಮತ್ತು ದೆಹಲಿ ಶಾಸಕ ರಾಮವೀರ್ ಸಿಂಗ್ ವಿಧೂರಿ ಕೂಡ ಇದ್ದರು.
ಮೇ 23ರಂದು ಆರಂಭವಾಗಿದ್ದ ಗುಜ್ಜಾರರ ಪ್ರತಿಭಟನೆಯಲ್ಲಿ, ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ಇದುವರೆಗೆ ಪೊಲೀಸ್ ಗೋಲೀಬಾರಿನಿಂದ 43 ಮಂದಿ ಸಾವಿಗೀಡಾಗಿದ್ದರು.
|