ಪೊಲೀಸರಿಂದ ಅತ್ಯಾಚಾರಕ್ಕೀಡಾಗಿರುವ ಮಹಿಳೆಯೊಬ್ಬರು ಹರ್ಯಾಣದ ಪಂಚಕುಲ ಪೊಲೀಸ್ ಠಾಣೆಯ ಹೊರಗಡೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಭವಿಸಿದೆ.
ಆತ್ಮಹತ್ಯೆಗೆ ಮುನ್ನ ಬರೆದಿಟ್ಟಿರುವ ಚೀಟಿಯಲ್ಲಿ ಸರಿತಾ ಎಂಬ ಮಹಿಳೆ, ಏಪ್ರಿಲ್ 10ರಂದು ಇಬ್ಬರು ಪೊಲೀಸರು ತನ್ನಮೇಲೆ ಅತ್ಯಾಚಾರ ಎಸದಿದ್ದು, ಇದು ವರೆಗೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ.
ಪೊಲೀಸ್ ಮುಖ್ಯಪೇದೆ ಬಲರಾಜ್ ಸಿಂಗ್ ಮತ್ತು ಪೇದೆ ಶೀಲಕ್ ರಾಂ ಎಂಬಿಬ್ಬರು ಈ ದುಷ್ಕೃತ್ಯ ಎಸಗಿರುವುದು ಡಿಎಸ್‌ಪಿ ಅವರ ತನಿಖೆಯಲ್ಲಿ ದೃಢಪಟ್ಟಿದ್ದರೂ ಅವರಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ, ಬದಲಿಗೆ ಅವರಿಬ್ಬರು ರಾಜಾರೋಷವಾಗಿ ತಿರುಗುತ್ತಿದ್ದಾರೆ ಎಂದು ಅವರು ಬರೆದಿರುವ ಪತ್ರದಲ್ಲಿ ಹೇಳಲಾಗಿದೆ. ಇದಲ್ಲದೆ, ದೂರು ಹಿಂತೆಗೆದುಕೊಳ್ಳುವಂತೆ ಆಕೆಯನ್ನು ಬೆದರಿಸಲಾಗಿತ್ತು ಎಂದೂ ಪತ್ರದಲ್ಲಿ ನಮೂದಿಸಲಾಗಿದೆ.
ಅಪರಾಧಿಗಳ ಬಂಧನದ ವಿಳಂಬದ ಕುರಿತು ತನಿಖೆ ನಡೆಸಲು ರೋತಕ್ ಐಜಿ ಆದೇಶಿದ್ದಾರೆ. ಅಲ್ಲದೆ ಆತ್ಮಹತ್ಯೆಗೆ ಕುಮ್ಮಕ್ಕು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಈ ಮಹಿಳೆಯು ಪಂಚಕುಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಿರುವ ವೇಳೆ ಆಕೆಯ ಇಬ್ಬರು ಹೆಣ್ಣು ಮಕ್ಕಳಾದ ಆರರ ಹರೆಯದ ಹೀನಾ ಮತ್ತು ಮೂರರ ಹರೆಯದ ಮಸ್ಕಾನ್ ಅಸಹಾಯಕತೆಯಿಂದ ವೀಕ್ಷಿಸುತ್ತಿದ್ದರು ಎಂದು ವರದಿ ತಿಳಿಸಿದೆ.
|