ಪುತ್ರಿ ಅರುಷಿ ಹತ್ಯಾ ಪ್ರಕರಣದ ಆರೋಪಿಯಾಗಿರುವ ಡಾ|ರಾಜೇಶ್ ತಲ್ವಾರ್ ಬಿಡುಗಡೆಗೆ ಗಾಜಿಯಾಬಾದ್ ಸಿಬಿಐ ಕೋರ್ಟ್ ಮಂಗಳವಾರದಂದು ಜಾಮೀನು ನಿರಾಕರಿಸಿದೆ. ಕಳೆದ ತಿಂಗಳು ನೋಯ್ಡಾದಲ್ಲಿರುವ ರಾಜೇಶ್ ನಿವಾಸದಲ್ಲಿ ಅರುಷಿ ಹಾಗೂ ಮನೆಕೆಲಸದ ಹೇಮರಾಜ್‌ನನ್ನು ಹತ್ಯೆಗೈಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಷಿಯ ತಂದೆ ದಂತವೈದ್ಯ ರಾಜೇಶ್ ತಲ್ವಾರ್‌ನನ್ನು ಬಂಧಿಸಲಾಗಿದ್ದು, ಇದೀಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಏತನ್ಮಧ್ಯೆ, ತನಿಖೆ ತೀವ್ರಗೊಳಿಸಿರುವ ಸಿಬಿಐ ರಾಜೇಶ್‌ನ ಕಾಂಪೌಂಡರ್ ಕೃಷ್ಣನೊಂದಿಗೆ ಸೋಮವಾರ ತಡರಾತ್ರಿ ಸುಮಾರು 11.45ರ ವೇಳೆಗೆ ನೋಯ್ಡಾದಲ್ಲಿರುವ ರಾಜೇಶ್ ನಿವಾಸದಲ್ಲಿ ಶೋಧಕಾರ್ಯ ನಡೆಸಿದೆ.
ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಅವರ ನೇತೃತ್ವದಲ್ಲಿ ಈ ತನಿಖೆ ನಡೆಸುವ ಮುನ್ನ ಕಾಂಪೌಂಡರ್ ಕೃಷ್ಣನನ್ನು ಆರು ಗಂಟೆಗಳ ಕಾಲ ಸುಳ್ಳುಪತ್ತೆ ಪರೀಕ್ಷೆಗೆ ಒಡ್ಡಲಾಗಿತ್ತು. ಕೊಲೆಗೀಡಾಗಿರುವ ಹೇಮರಾಜ್ ಕೋಣೆಯಲ್ಲಿ ಕೆಲವು ಸುಳಿವು ಪತ್ತೆಯಾಗಿದೆ ಎಂದು ಸಿಬಿಐ ಹೇಳಿದೆ.
ಅರುಷಿಯ ಕೊಲೆಯಾದ ಮೇ15ರಂದು ಹೇಮರಾಜ್ ಕೊಠಡಿಯಲ್ಲಿ ಮೂವರು ಕುಳಿತು ಮದ್ಯಸೇವಿಸಿರುವ ಕುರುಹುಗಳು ಲಭ್ಯವಾಗಿವೆ. ಇದರಲ್ಲೊಬ್ಬ ಕೃಷ್ಣನಾಗಿದ್ದು ಮೂರನೆಯ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ತನಿಖಾದಳದ ಮೂಲಗಳು ಹೇಳಿವೆ.
|