ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಒತ್ತಾಯಿಸಿ ಸುಮಾರು 18 ದಿನಗಳಿಂದ ನಡೆಯುತ್ತಿರುವ ಗುಜ್ಜಾರ್ ಸಮುದಾಯದ ಉಗ್ರ ಹೋರಾಟದಿಂದಾಗಿ ರೈಲ್ವೇ ಇಲಾಖೆಗೆ 40 ಕೋಟಿ ರೂಪಾಯಿಗಿಂತಲೂ ಅಧಿಕ ನಷ್ಟಉಂಟಾಗಿದೆ ಎಂದು ರೈಲ್ವೇ ಇಲಾಖಾ ಅಧಿಕಾರಿ ಹೇಳಿದ್ದಾರೆ.
ರಾಜಸ್ತಾನ ಮತ್ತು ಸುತ್ತಮುತ್ತಲ ರಾಜ್ಯಗಳಲ್ಲಿ ನಡೆಯುತ್ತಿರುವ ಮುಷ್ಕರದಿಂದಾಗಿ 1000ಕ್ಕೂ ಹೆಚ್ಚು ರೈಲು ಪ್ರಯಾಣವನ್ನು ರದ್ದುಗೊಳಿಸಲಾಗಿದೆ, ಇಲ್ಲವೇ ಮಾರ್ಗ ಬದಲಿಸಲಾಗಿದೆ ಅಥವಾ ಕುಂಠಿತಗೊಳಿಸಲಾಗಿದೆ. ಪ್ರಯಾಣಿಕರ ಪ್ರಯಾಣ ದರದಿಂದ ಸಂಗ್ರಹವಾಗುವ ಮೊತ್ತ, ಸರಕು ಸಾಗಾಟದಿಂದ ಇಲಾಖೆಯು ಪಡೆಯುವ ದರಗಳಲ್ಲದೆ, ರೈಲ್ವೇ ಹಳಿಗಳಿಗೆ ಮುಷ್ಕರನಿ ರತರು ಮಾಡಿರುವ ಹಾನಿಯಿಂದಾಗಿ ಈ ನಷ್ಟ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ದೆಹಲಿ-ಮುಂಬೈ ನಡುವಿನ ನೇರಮಾರ್ಗಕ್ಕೆ ಹೆಚ್ಚು ಹಾನಿಯಾಗಿದೆ. ಉತ್ತರ ಹಾಗೂ ಪಶ್ಚಿಮ ರೈಲ್ವೇಯು ಮುಷ್ಕರದಿಂದಾಗಿ ಗರಿಷ್ಠ ನಷ್ಟ ಅನುಭವಿಸಿವೆ.
ಮುಷ್ಕರದಿಂದ ಇಲಾಖೆ ಅನುಭವಿಸಿರುವ ಒಟ್ಟು ಮೊತ್ತದ ಕುರಿತು ರೈಲ್ವೇ ಇಲಾಖೆಯು ಅಂತಿಮ ನಿರ್ಣಯಕ್ಕೆ ಇನ್ನಷ್ಟೆ ಬರಬೇಕಾಗಿದೆ. ಪ್ರಾಂತೀಯ ರೈಲ್ವೇಯ ಪ್ರಾಥಮಿಕ ವರದಿಗಳ ಅಂದಾಜು ಪ್ರಕಾರ ಒಟ್ಟು ನಷ್ಟವು 40 ಕೋಟಿಗಿಂತ ಅಧಿವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
|