"ಸಂಸತ್ ಭವನದ ಮೇಲೆ ದಾಳಿ ನಡೆಸಿರುವ ಅಫ್ಜಲ್ ಗುರುವಿನ ಕ್ರಮ 'ಅಕ್ಷಮ್ಯ'. ಆದರೆ, ಆತನ ಮರಣದಂಡನೆಗೆ ಸಂಬಂಧಿಸಿದಂತೆ ಕಾನೂನು ಅದರದ್ದೇ ಆದರ ಕ್ರಮಗಳನ್ನು ಕೈಗೊಳ್ಳಬೇಕಿದೆ" ಎಂದು ಕಾಂಗ್ರೆಸ್ ಹೇಳಿದೆ. ಕಾನೂನು ಪ್ರಕಾರ, ಕ್ಷಮಾದಾನ ಮನವಿಗಳಿಗೆ ಸಂಬಂಧಿಸಿದಂತೆ, ಮೊದಲು ಸಲ್ಲಿಸಿದ ಮನವಿಗಳನ್ನು ಮೊದಲು ನಿರ್ಧರಿಸಲಾಗುತ್ತದೆ ಎಂದೂ ಪಕ್ಷ ಹೇಳಿದೆ.
ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಕಾಂಗ್ರೆಸ್ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಎಲ್.ಕೆ.ಆಡ್ವಾಣಿ ಗೃಹಸಚಿವರಾಗಿದ್ದ ಎನ್‌ಡಿಎ ಆಡಳಿತದ ವೇಳೆ ಎನ್‌ಡಿಎ ಸರಕಾರವು ಯಾಕೆ 15 ಕ್ಷಮಾದಾನ ಅರ್ಜಿಯನ್ನು ಅಡಿಗೆಹಾಕಿ ಕುಳಿತಿತ್ತು ಎಂದು ಖಾರವಾಗಿ ಪ್ರಶ್ನಿಸಿದೆ.
1997ರಿಂದೀಚೆಗೆ ವಿಚಾರಣೆಗೆ ಬಾಕಿಯುಳಿದಿರುವ 28 ಅರ್ಜಿಗಳಲ್ಲಿ 15 ಅರ್ಜಿಗಳನ್ನು ಎನ್‌ಡಿಎ ಆಡಳಿತದ ಕಾಲದಲ್ಲಿ ಸಲ್ಲಿಸಲಾಗಿತ್ತು. 12 ಅರ್ಜಿಗಳನ್ನು 2004ರಲ್ಲಿ ಯುಪಿಎ ಮೈತ್ರಿಕೂಟ ಆಡಳಿತಕ್ಕೆ ಬಂದಬಳಿಕ ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಮನಿಷ್ ತಿವಾರಿ ಅಂಕಿಅಂಶಗಳನ್ನು ನೀಡಿದರು.
ಯುಪಿಎ ಸರಕಾರ ಮುಸ್ಲಿಂ ಒಲೈಕೆಗೆ ಯತ್ನಿಸುತ್ತಿದೆ ಎಂಬ ಬಿಜೆಪಿ ದೂರಿಗೆ ಉತ್ತರಿಸಿದ ಅವರು ಅಫ್ಜಲ್ ಶಿಕ್ಷೆಯನ್ನು ತಗ್ಗಿಸಿದರೆ ಅಥವಾ ಆತನಿಗೆ ಕ್ಷಮಾದಾನ ನೀಡಿದರೆ ಸಮುದಾಯಕ್ಕೆ ಸಮಾಧಾನವಾಗುತ್ತದೆಯೇ ಎಂದು ಪ್ರಶ್ನಿಸಿದರು. "ನಿಂದನಾರ್ಹವಾಗಿರುವ ಈ ಆರೋಪವನ್ನು ನಾವು ತಳ್ಳಿಹಾಕುತ್ತೇವೆ. ಈ ರಾಷ್ಟ್ರದ ಪ್ರತೀಮುಸ್ಲಿಮನೂ ಇತರ ಯಾವುದೇ ಪ್ರಜೆಯಂತೆಯೇ ದೇಶಭಕ್ತನಾಗಿದ್ದಾನೆ" ಎಂದು ಅವರು ಹೇಳಿದ್ದಾರೆ.
|