ಇಲ್ಲಿನ ಆಸ್ಪತ್ರೆಯೊಂದರಲ್ಲಿ ತನ್ನ ನವಜಾತ ಹೆಣ್ಣುಮಗುವನ್ನು ಇನ್ನೊಂದು ನವಜಾತ ಗಂಡುಮಗುವಿನೊಂದಿಗೆ ಅದಲುಬದಲು ಮಾಡಿದ ಮಹಿಳೆಯೊಬ್ಬಾಕೆ ಇದೀಗ ಪೊಲೀಸರ ಬಂಧನಕ್ಕೊಳಗಾಗಿದ್ದಾಳೆ.
ಮೂರನೆ ಬಾರಿಯೂ ಹೆಣ್ಣುಮಗು ಜನಿಸಿತೆಂದು ಗಂಡನ ಕ್ರೋಧವನ್ನು ಕಲ್ಪಿಸಿದ ಮಹಿಳೆ ಈ ದುಸ್ಸಾಹಸಕ್ಕಿಳಿದಿದ್ದಳು. ಕೆಲವು ದಿನಗಳ ಹಿಂದೆ ಇದೀಗಾಗಲೇ ಎರಡು ಹೆಮ್ಮಕ್ಕಳನ್ನು ಹೊಂದಿರುವ ಸರಿತ ಎಂಬ ಹೆಸರಿನ ಈ ಮಹಿಳೆ ಮೂರನೆ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಳು. ಗಂಡನ ಕೋಪಕ್ಕೆ ಬೆದರಿದ ಈಕೆ ತನ್ನದೇ ವಾರ್ಡ್‌ನಲ್ಲಿದ್ದ ಅಲಮೇಲು ಎಂಬ ಹೆಸರಿನ ಬಾಣಂತಿ ಸ್ಕ್ಯಾನಿಂಗ್‌ಗೆ ತೆರಳಿದ್ದ ವೇಳೆ ತೊಟ್ಟಿಲಲ್ಲಿದ್ದ ಆಕೆಯ ಗಂಡುಮಗುವಿನ ಜಾಗದಲ್ಲಿ ತನ್ನ ಹೆಣ್ಣುಮಗುವನ್ನು ಮಲಗಿಸಿ, ಆ ಮಗುವನ್ನು ಎತ್ತಿ ಹೊರನಡೆದಿದ್ದಳು. ಸ್ಕ್ಯಾನಿಂಗ್ ಮುಗಿಸಿ ಹಿಂತಿರುಗಿನ ಅಲಮೇಲು ತನ್ನ ಗಂಡುಮಗು ಕಾಣೆಯಾಗಿದ್ದು, ಆ ಜಾಗದಲ್ಲಿ ಹೆಣ್ಣುಮಗುವನ್ನು ಕಂಡು ಆಘಾತಗೊಂಡು ಪೊಲೀಸರಿಗೆ ದೂರು ನೀಡಿದ್ದಳು.
ಸರಿತ ಎಂಬ ಮಹಿಳೆಯು ಆಸ್ಪತ್ರೆಯಿಂದ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಇದು ಆಕೆಯದೇ ಕೃತ್ಯಇರಬಹುದು ಎಂದು ಸಂಶಯಿಸಿದ ಪೊಲೀಸರು ಸರಿತಾಳ ಮನೆಗೆ ತೆರಳಿ ಗಂಡುಮಗುವನ್ನು ಪತ್ತೆ ಹಚ್ಚಿದ್ದರು. ಪೊಲೀಸರು ಹೆಚ್ಚಿನ ತನಿಖೆಗಾಗಿ ಸರಿತಾ ಹಾಗೂ ಕದ್ದ ಮಗುವನ್ನು ಬುಧವಾರ ಪುದುಚೇರಿಗೆ ಕರೆತಂದಿದ್ದಾರೆ.
ತನ್ನ ಮಗುವನ್ನು ಪುನಃಪಡೆದ ಅಲಮೇಲು ಅತೀವ ಸಂತಸಗೊಂಡಿದ್ದಾರೆ. ಸರಿತಾಳ ಹೆಣ್ಣುಮಗುವನ್ನು ಆಕೆಗೆ ಮರಳಿ ನೀಡಲಾಗಿದ್ದು ತನಿಖೆ ಮುಂದುವರಿದಿದೆ.
|