ನವದೆಹಲಿ: ವಾಷಿಂಗ್ಟನ್ ನಿಯೋಗದ ಉಪಮುಖ್ಯಸ್ಥರಾಗಿದ್ದ ರಮೀಂದರ್ ಸಿಂಗ್ ಜಸ್ಸಾಲ್ ಅವರನ್ನು ಭಾರತ ಸರಕಾರವು ಟರ್ಕಿ ರಾಯಭಾರಿಯಾಗಿ ನಿಯೋಜಿಸಿದೆ. ಅಲ್ಲಿನ ರಾಯಭಾರಿಯಾಗಿದ್ದ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ಪುತ್ರಿ ಚಿತ್ರಾ ನಾರಾಯಣನ್ ಅವರು ಸ್ವಿಜರ್‌ಲ್ಯಾಂಡ್ ರಾಯಭಾರಿಯಾಗಿ ನಿಯೋಜನೆಗೊಂಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ 1999ರಿಂದ 2001 ತನಕ ವಿದೇಶಾಂಗ ಪ್ರಚಾರ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದ ಅವರು ಕಾರ್ಗಿಲ್ ಯುದ್ಧ ಸಮಯದಲ್ಲಿ ಭಾರತದ ಸ್ಥಿತಿಗತಿ ಕುರಿತು ವಿಶ್ವವನ್ನು ಸಂವಹಿಸುವ ಜವಾಬ್ದಾರಿ ಹೊಂದಿದ್ದರು.
1976ರ ಬ್ಯಾಚಿನ ಐಎಫ್ಎಸ್ ಅಧಿಕಾರಿಯಾಗಿರುವ ಅವರು ಭಾರತದ ಅಧಿಕೃತ ವಕ್ತಾರರಾಗಿದ್ದರು. ಪ್ರಧಾನ ಮಂತ್ರಿಗಳ ಎಲ್ಲಾ ವಿದೇಶ ಪ್ರವಾಸಗಳ ಮಾಧ್ಯಮ ವ್ಯವಸ್ಥೆ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ಕ್ಲಿಂಟನ್ ಭಾರತಕ್ಕೆ ನೀಡಿದ್ದ ಭೇಟಿ ಸೇರಿದಂತೆ ಎಲ್ಲಾ ವಿದೇಶಿ ಗಣ್ಯರ ಭೇಟಿಗಳ ಮಾಧ್ಯಮ ವ್ಯವಸ್ಥೆಯನ್ನು ನಿರ್ವಹಿಸಿದ್ದರು.
ವಿರೋಧ ಪಕ್ಷಗಳ ವಿರೋಧದಿಂದಾಗಿ ಇದೀಗ ನೆನೆಗುದಿಗೆ ಬಿದ್ದಿರುವ ಭಾರತ ಅಮೆರಿಕ ನಾಗರಿಕ ಅಣುಒಪ್ಪಂದದ ಮಾತುಕತೆ ತಂಡದ ಸದಸ್ಯರೂ ಆಗಿದ್ದರು.
ಜಸ್ಸಾಲ್ ಅವರು 2001-04ರ ತನಕ ಇಸ್ರೇಲ್ ರಾಯಭಾರಿಯಾಗಿದ್ದರು ಮತ್ತು 2005 ಜನವರಿ 17ರ ಬಳಿಕ ವಾಷಿಂಗ್ಟನ್‌ನಲ್ಲಿ ಭಾರತೀಯ ನಿಯೋಗದ ಉಪಮುಖ್ಯಸ್ಥರಾಗಿದ್ದರು.
|