ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ನೊಯ್ಡಾ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಡಾ| ರಾಜೇಶ್ ತಲ್ವಾರ್ ಸಹಾಯಕ ಕಾಂಪೋಂಡರ್ ಕೃಷ್ಣನ ಮೇಲೆ ನಡೆಸಲಾಗಿರುವ ನಾರ್ಕೊ ಪರೀಕ್ಷೆ ಅಂತ್ಯಗೊಂಡಿದೆ.
ಅರುಷಿ ಹಾಗೂ ಹೇಮರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ನಾರ್ಕೊ ಪರೀಕ್ಷೆಯಿಂದ ತಿಳಿದು ಬಂದಿದ್ದು, ನಾಳೆ ಸಿಬಿಐ ಈತನನ್ನು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಗಳಿವೆ.
ರಾಜೇಶ್ ತಲ್ವಾರ್‌ನ ಆಸ್ಪತ್ರೆಯ ಕಂಪೌಂಡರ್ ಆಗಿದ್ದ ಕೃಷ್ಣ ಕೊಲೆಯ ಕುರಿತು ಕೆಲವು ಮಹತ್ವದ ಮಾಹಿತಿಗಳನ್ನು ನೀಡಿದ್ದಾನೆ. ತಲ್ವಾರ್ ಕೊಲೆಯ ಪ್ರಮುಖ ಆರೋಪಿ ಎಂಬುದನ್ನು ಈತ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ.
ಅರುಣ್ ಕುಮಾರ್ ನೇತೃತ್ವದ ಸಿಬಿಐ ತಂಡ ನಿನ್ನೆ ಬೆಳಿಗ್ಗೆಯೇ ನಗರಕ್ಕೆ ಬಂದಿಳಿದಿದೆಯಾದರೂ, ನ್ಯಾಯಾಲಯವು ನಾರ್ಕೊ ಪರೀಕ್ಷೆ ಹಾಗೂ ಬ್ರೈನ್ ಮ್ಯಾಪಿಂಗ್ ನಡೆಸಲು ನಿನ್ನೆ ಸಂಜೆಯಷ್ಟೆ ಅನುಮತಿ ನೀಡಿತ್ತು. ಈ ನಿಟ್ಟಿನಲ್ಲಿ ನಿನ್ನೆ ಸಂಜೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಯಿತು. ಅಂತೆಯೇ ಇಂದು ಸಂಜೆ 5.30 ಗಂಟೆಯ ತನಕ ನಡೆಸಿದ ನಾರ್ಕೊ ಪರೀಕ್ಷೆಯಲ್ಲಿ ಕೃಷ್ಣನಿಗೆ ಸಿಬಿಐ ಅಧಿಕಾರಿ 350ಕ್ಕೂ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ.
|