ಪೂನಾ: ಮಹಾರಾಷ್ಟ್ರದ ಕಂದಾಯ ಸಚಿವ ನಾರಾಯಣ ರಾಣೆಯ ಬೆಂಬಲಿಗರೆನ್ನಲಾದವರ ಗುಂಪೊಂದು ಶಿವಾ ಸೇನಾದ ಮುಖವಾಣಿ ಪತ್ರಿಕೆಯಾಗಿರುವ 'ಸಾಮ್ನಾ'ದ ಮೇಲೆ ದಾಳಿ ನಡೆಸಿದೆ. ಪತ್ರಿಕೆಯು, ರಾಣೆಯವರು ಸೀರೆ ತೊಟ್ಟಿಂತಿರುವ ಚಿತ್ರವನ್ನು ಪ್ರಕಟಿಸಿರುವುದರಿಂದ ರೊಚ್ಚಿಗೆದ್ದವರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಸಾಮ್ನಾ ಪತ್ರಿಕಾ ಕಚೇರಿ, ಮುದ್ರಣಾಲಯ ಮತ್ತು ಇತರ ಕಚೇರಿಗಳಿರುವ ಸಂಕೀರ್ಣದ ಮೇಲೆ ದಾಳಿ ಮಾಡಿರುವ ಸುಮಾರು 25 ಮಂದಿಯ ತಂಡವು ಗುರುವಾರ ರಾತ್ರಿ ಕಟ್ಟಡದ ಮೇಲೆ ಕಲ್ಲುಗಳನ್ನು ತೂರಿದ್ದು, ಕಿಟಿಕಿ ಗಾಜುಗಳನ್ನು ಒಡೆದು ಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೀರೆ ಧರಿಸಿದ ರಾಣೆಯವರ ಚಿತ್ರವನ್ನು ಸಾಮ್ನಾವು ತನ್ನ ಗುರುವಾರದ ಆವೃತ್ತಿಯ ಮುಖಪುಟದಲ್ಲಿ ಪ್ರಕಟಿಸಿತ್ತು.
ಈ ದಾಳಿಗೆ ಸಂಬಂಧಿಸಿದಂತೆ ಪೊಲೀಸರು 30 ಮಂದಿಯನ್ನು ಬಂಧಿಸಿದ್ದಾರೆ.
|