ಗಡಿ ಪ್ರದೇಶದಲ್ಲಿ 24 ಗಂಟೆಗಳೂ ಕಾವಲು ಕಾಯಬೇಕಿರುವ ಸವಾಲಿನ ಮಧ್ಯೆಯೂ, ಗಡಿ ಭದ್ರತಾ ಪಡೆಯ ಸೇರ್ಪಡೆಗೆ 15 ಸಾವಿರಕ್ಕೂ ಅಧಿಕ ಮಹಿಳೆಯರು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಜಲಂಧರ್‌ನಲ್ಲಿನ ಆಯ್ಕಾ ಶಿಬಿರದಲ್ಲಿ ಈ ಉತ್ಸಾಹಿ ಯುವತಿಯರೇ ದಂಡೆ ಹರಿದು ಬಂದಿದೆ. ಭದ್ರತಾ ಪಡೆಯು 600ಕ್ಕಿಂತಲೂ ಅಧಿಕ ಮಹಿಳಾ ಪೇದೆಗಳ ನೇಮಕಾತಿಗೆ ಮುಂದಾಗಿದೆ. ಇವರು ಕಠಿಣ ತರಬೇತಿಯ ಬಳಿಕ ಗಡಿ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿದ್ದಾರೆ.
"ನಾವು ಯಾವುದೇ ಕ್ಷೇತ್ರದಲ್ಲಿ ಹಿಂದುಳಿದಿಲ್ಲ ಎಂದು ತಿಳಿಸಲು ಇದು ಮಹಿಳೆಯರಿಗೆ ಅತ್ಯುತ್ತಮ ಅವಕಾಶವಾಗಿದೆ. ಸುನಿತಾ ವಿಲಿಯಮ್ಸ್, ಪಿ.ಟಿ.ಉಷಾ ಮತ್ತು ಇತರ ಹಲವಾರು ಮಹಿಳೆಯರನ್ನು ನೋಡಿ, ಅವರಸಾಧನೆಗೆ ಸರಿಸಾಟಿ ಯಾವುದು? ಇದು ಹುಡುಗಿಯರ ಘನತೆಯನ್ನು ಎತ್ತರಿಸಲು ಅತಿಮುಖ್ಯ ಕ್ರಮವಾಗಿದೆ" ಎಂದು ಉದ್ಯೋಗಾಕಾಂಕ್ಷಿ ಯುವತಿ ಸಿಮ್ರಾನ್ ಜಿತ್ ಕೌರ್ ಹೇಳುತ್ತಾರೆ. "ಗಡಿಭದ್ರತಾ ಪಡೆಯಿರಲಿ, ಇಲ್ಲ ಸೇನೆ ಇರಲಿ, ಹುಡುಗಿಯರು ಹಿಂದೆಬಿದ್ದಿಲ್ಲ. ದೇಶಕ್ಕಾಗಿ ಸೇವೆ ಸಲ್ಲಿಸಲು ನಾನು ಸಂತೋಷದಿಂದಿದ್ದೇನೆ" ಎಂದು ರಿತು ಶರ್ಮಾ ಎಂಬ ಉತ್ಸಾಹಿ ಹುಡುಗಿ ಹೇಳಿದ್ದಾರೆ.
"ಈ ಯುವತಿಯರು ನಮ್ಮ ಇತರೇ ಸೈನಿಕರಂತೆ ತರಬೇತಿ ಪಡೆಯಲಿದ್ದಾರೆ. ಯಾವುದೇ ಯುದ್ಧದಲ್ಲೂ ಪಾಲ್ಗೊಳ್ಳುವಂತೆ ಅವರನ್ನು ತರಬೇತುಗೊಳಿಸಲಾಗುತ್ತದೆ. ಆದರೆ ತಕ್ಷಣಕ್ಕೆ ಇವರನ್ನು ಗಡಿಯಲ್ಲಿ ಅಕ್ರಮವಾಗಿ ನುಸುಳುವ ಮಹಿಳೆಯರ ಪತ್ತೆಗೆ ಬಳಸಲಾಗುತ್ತದೆ ಎಂದು ಗಡಿಭದ್ರತಾ ಪಡೆಯ ಜಲಂಧರ್ ಡಿಐಜಿ ಕೆ.ಜೆ.ಎಸ್. ಚೀಮ ಹೇಳಿದ್ದಾರೆ.
ಹೆಣ್ಣುಭ್ರೂಣ ಹತ್ಯೆ ಅವ್ಯಾಹತವಾಗಿರುವ, ಮರ್ಯಾದೆಗಾಗಿ ಹೆಣ್ಣುಮಕ್ಕಳನ್ನು ಕೊಲ್ಲುತ್ತಿರುವ ರಾಷ್ಟ್ರದಲ್ಲಿ, ಈ ಹೆಮ್ಮೆಯ ಹೆಮ್ಮಕ್ಕಳು ನಾವ್ಯಾರಿಗೂ ಕಮ್ಮಿಯಿಲ್ಲ ಎಂಬ ಸಂದೇಶ ರವಾನಿಸುತ್ತಿದ್ದಾರೆ.
|