ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳಿಂದ ರಾಷ್ಟ್ರದೊಳಕ್ಕೆ ಅಕ್ರಮವಾಗಿ ತೂರಿಬರುವವರಿಗೆ ಕಠಿಣ ಶಿಕ್ಷೆ ವಿಧಿಸುವ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ಮೌಲ್ಯಯುತ ದಾಖಲೆ ಪತ್ರಗಳಿಲ್ಲದೆ ರಾಷ್ಟ್ರದೊಳಕ್ಕೆ ನುಸುಳಿರುವ ವ್ಯಕ್ತಿಗಳ ದೊಡ್ಡ ಸಂಖ್ಯೆಯನ್ನು ಪರಿಗಣಿಸಿದರೆ, ಕಠಿಣಶಿಕ್ಷೆ ನೀಡುವ ಅವಶ್ಯಕತೆ ಇದೆ ಎಂದು ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್ ಮತ್ತು ಪಿ.ಪಿ. ನವೊಲೆಕರ್ ಅವರನ್ನೊಳಗೊಂಡ ನ್ಯಾಯಪೀಠವು, ರಾಷ್ಟ್ರದೊಳಗೆ ಅಕ್ರಮವಾಗಿ ನುಸುಳಿರುವ ಪಾಕಿಸ್ತಾನದ ಹಬೀಹ್ ಇಬ್ರಾಹಿಂ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ವಜಾಮಾಡುತ್ತಾ ಅಭಿಪ್ರಾಯಿಸಿದೆ.
ಜೈಪುರದಲ್ಲಿರುವ ತನ್ನ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗಲು ದೇಶದೊಳಕ್ಕೆ ಅಕ್ರಮವಾಗಿ ನುಸುಳಿರುವ ಈತನ, "ವಲಸೆ ಕಾನೂನು ಕುರಿತು ತನಗೆ ಅರಿವಿರಲಿಲ್ಲ" ಎಂಬ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ.
ತನಗೆ ದಾಖಲೆಗಳನ್ನು ಹೊಂದಿರಬೇಕು ಎಂಬ ದುರ್ಬಲ ವಾದ ತಿರುಳಿಲ್ಲದ್ದು. ಹಾಗಿರುತ್ತಿದ್ದರೆ ಆತ ನೇಪಾಳಕ್ಕೆ ತೆರಳಲು ತಾತ್ಕಾಲಿಕ ರಹದಾರಿ ಅನುಮತಿ ಪತ್ರ ಹೊಂದುತ್ತಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಜನವರಿ 13, 2004ರಂದು ಇಬ್ರಾಹಿಂನನ್ನು ರಾಜಸ್ಥಾನದ ವಿಧಾದರ್ ನಗರ ಬಸ್‌ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತನ ಬಳಿಯಲ್ಲಿಪಾಕಿಸ್ತಾನ ಪಾಸ್‍ಪೋರ್ಟ್ ಮತ್ತು ಅವಧಿ ಮೀರಿದ ನೇಪಾಳ ವೀಸಾವಿತ್ತು. ಆದರೆ ಆತ ಭಾರತಕ್ಕೆ ಪ್ರವೇಶಿಸಲು ಅಗತ್ಯವಿರುವ ದಾಖಲೆಗಳು ಆತನ ಬಳಿ ಇರಲಿಲ್ಲ.
ಈ ಪ್ರಕರಣದ ವಿಚಾರಣೆ ನಡೆಸಿದ ಜೈಪುರ ಸೆಷನ್ಸ್ ಕೋರ್ಟ್ ಇಬ್ರಾಹಿಂಗೆ ಐದು ವರ್ಷಗಳ ಜೈಲು ಮತ್ತು 25 ಸಾವಿರ ರೂಪಾಯಿಗಳ ದಂಡ ವಿಧಿಸಿತ್ತು.
ಈ ತೀರ್ಪಿನ ಕುರಿತು ರಾಜಸ್ಥಾನ ಹೈಕೋರ್ಟಿಗೆ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ತಳ್ಳಿಹಾಕಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಸಹ ಆಧೀನ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.
|