ಈ ತಿಂಗಳಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿ(ಎಸ್) ನೊಂದಿಗೆ ಹೊಂದಾಣಿಕೆಯ ಸಾಧ್ಯತೆಗಳ ಕುರಿತು ವಿಚಾರ ಮಾಡುತ್ತಿದೆ ಎನ್ನಲಾಗಿದೆ.
ರಾಜ್ಯದ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಚೌವಾಣ್ ಈ ಕುರಿತು ಜೆಡಿ(ಎಸ್) ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
224 ಸ್ಥಾನ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 80 ಸದಸ್ಯರನ್ನು ಹೊಂದಿದ್ದು, ಒಂದು ರಾಜ್ಯಸಭಾ ಸ್ಥಾನವನ್ನು ಹೊಂದುವ ಕುರಿತು ವಿಶ್ವಾಸ ಹೊಂದಿದೆ. ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಏನಾದರೂ ಯಶಸ್ವಿಯಾದಲ್ಲಿ ಅದು ಮೇಲ್ಮನೆಯಲ್ಲಿ ಎರಡು ಸ್ಥಾನಗಳನ್ನು ಹೊಂದಬಹುದಾಗಿದೆ.
ರಾಜ್ಯ ವಿಧಾನಪರಿಷತ್ ಮತ್ತು ರಾಜ್ಯಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯಸಭೆಗೆ ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಹೆಸರು ಕೇಳಿಬರುತ್ತಿದೆ.
ಅದಾಗ್ಯೂ, ಮಾಜಿ ಮುಖ್ಯಮಂತ್ರಿಗಳು ಹಿಂಬಾಗಿಲ ಪ್ರವೇಶ ಮಾಡಬಾರದು ಎಂಬುದಾಗಿ ಹಿರಿಯ ಎಐಸಿಸಿ ನಾಯಕರೊಬ್ಬರು ಹೇಳಿದ್ದಾರೆ.
|