ಗೂರ್ಖಾ ಜನಮುಕ್ತಿ ಮೋರ್ಚಾ(ಜಿಜೆಎಂ)ದ ಬೇಡಿಕೆಯಂತೆ ಗೂರ್ಖಾಲ್ಯಾಂಡನ್ನು ಪಶ್ಚಿಮ ಬಂಗಾಳದಿಂದ ಬೇರ್ಪಡಿಸಿ ಪ್ರತ್ಯೇಕ ರಾಜ್ಯವಾಗಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆಯಾದರೂ, ಸಂಘಟನೆಯೊಂದಿಗೆ ಮಾತುಕತೆಗೆ ಸಿದ್ಧವೆಂದು ಹೇಳಿದೆ.
ಗೂರ್ಖಾಲ್ಯಾಂಡ್ ಪ್ರತ್ಯೆಕ ರಾಜ್ಯ ಸ್ಥಾಪಿಸುವ ಪ್ರಶ್ನೆಯೇ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ನುಡಿದರು. ಅವರು ವ್ಯಾಪಾರಿಗಳ ಚೇಂಬರ್ ಆಫ್ ಕಾಮರ್ಸ್‌ನ ಮಹಾಸಭೆಯ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಯಾವುದೇ ಪೂರ್ವಷರತ್ತುಗಳಿಲ್ಲದೆ ಸರಕಾರ ಜಿಜೆಎಂ ಜೊತೆಗೆ ಮಾತುಕತೆಗೆ ಸಿದ್ಧವಿದೆ ಎಂದು ತಿಳಿಸಿದರು. ಸಚಿವರು ಈ ವಿಚಾರವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರೊಂದಿಗೆ ಸಂಕ್ಷಿಪ್ತ ಸಭೆಯೊಂದನ್ನು ಶನಿವಾರ ನಡೆಸಿದರು.
ಪ್ರತ್ಯೇಕ ರಾಜ್ಯ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಜೆಎಂ ಜೂನ್ 10ರಿಂದ ಅನಿರ್ದಿಷ್ಟಾವಧಿ ಬಂದ್‌ಗೆ ಕರೆನೀಡಿದೆ. ಬಂದ್ ಕರೆಗೆ ಮುನ್ನ, ಪ್ರವಾಸಿಗಳು ರಾತೊರಾತ್ರಿ ಡಾರ್ಜಿಲಿಂಗ್ ತೊರೆಯುವಂತೆ ತಾಕೀತು ಮಾಡಿತ್ತು.
ಜೂನ್ 11ರಂದು ಅಪರಾಹ್ನ 4 ಗಂಟೆಯ ಬಳಿಕ ಬಂದ್ ಸಡಿಲಗೊಳಿಸಿದ ಸಂಘಟನೆಯು, ಸಿಕ್ಕಿಬಿದ್ದಿರುವ ಪ್ರವಾಸಿಗಳು ಸ್ಥಾನ ತೊರೆಯಲು ಮತ್ತು ಜನತೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಿತ್ತು.
|