ಕಾಂಗ್ರೆಸ್ ಆಡಳಿತವಿರುವ ದೆಹಲಿ ಮತ್ತು ಆಂಧ್ರಪ್ರದೇಶಗಳ ಹೆಜ್ಜೆಜಾಡು ಹಿಡಿದಿರುವ ತಮಿಳ್ನಾಡು ಸರಕಾರ ಅಡುಗೆ ಅನಿಲ ಸಿಲಿಂಡರ್ ಒಂದರ 30 ರೂಪಾಯಿ ಸಬ್ಸಿಡಿ ಘೋಷಿಸಿದೆ. ಆದರೆ, ಒಂದು ಸಿಲಿಂಡರ್ ಹೊಂದಿರುವವರಿಗೆ ಮಾತ್ರ ಈ ಸಹಾಯಧನ ಲಭಿಸಲಿದೆ.
ಇತ್ತೀಚೆಗೆ ಕೇಂದ್ರವು ಪೆಟ್ರೋಲಿಯಂ ಬೆಲೆ ಏರಿಸಿದ್ದ ವೇಳೆ ಗ್ಯಾಸ್ ಸಿಲಿಂಡರ್ ಒಂದರ 50 ರೂಪಾಯಿ ಏರಿಕೆಯಾಗಿತ್ತು.
ತಮಿಳ್ನಾಡು ಸರಕಾರದ ಈ ಕ್ರಮದಿಂದಾಗಿ ಹೆಚ್ಚುವರಿ 100 ಕೋಟಿ ರೂಪಾಯಿ ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಆದರೆ ಇದರಿಂದಾಗಿ ರಾಜ್ಯದ 50 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಕರುಣಾನಿಧಿ ನುಡಿದರು. ಅವರು ಇಲ್ಲಿ ನಡೆದ ಡಿಎಂಕೆ ಮಹಿಳಾ ಘಟಕದ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.
ಅನಿಲ ಗ್ರಾಹಕರು ರೂಪಾಯಿ 20 ಮಾತ್ರ ಹೆಚ್ಚುವರಿ ನೀಡಿದರೆ ಸಾಕು. ಉಳಿದ ಮೊತ್ತವನ್ನು ಸರಕಾರ ಭರಿಸಲಿದೆ ಎಂದು ತಿಳಿಸಿದ ಕರುಣಾನಿಧಿ, ಹಣಕಾಸು ಕಾರ್ಯದರ್ಶಿಯವರೊಂದಿಗೆ ಸಮಾಲೋಚಿಸಿದ ಬಳಿಕ ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ನುಡಿದರು.
ಇದಲ್ಲದೆ ಕೇಂದ್ರಸರಕಾರವು ಕೇಳುವ ಮುನ್ನವೇ ತನ್ನ ಸರಕಾರ ಡೀಸೆಲ್ ಮೇಲಿನ ಶೇ.2ರಷ್ಟು ಮಾರಾಟ ತೆರಿಗೆಯನ್ನು ಇಳಿಸಿರುವುದಾಗಿ ನುಡಿದರು.
|