"ದಯವಿಟ್ಟು ಒಂದು ದಿನವನ್ನೂ ಪೋಲುಮಾಡಬೇಡಿ. ರಾಜದ್ರೋಹ ಪ್ರಕರಣವನ್ನು ನನ್ನ ವಿರುದ್ಧ ದಾಖಲಿಸಿ ಮತ್ತು ನನ್ನನ್ನು ಗಲ್ಲಿಗೇರಿಸಿ ಎಂಬುದಾಗಿ ಇಡಿಯ ಕಾಂಗ್ರೆಸ್ ಆಡಳಿತವನ್ನು ಆಹ್ವಾನಿಸುತ್ತೇನೆ. ಅವರು ಹೇಗೆ ಮಾಡುತ್ತಾರೆ ಎಂದು ನಾನೂ ನೋಡುತ್ತೇನೆ" ಎಂಬುದಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಕೇಂದ್ರದಿಂದ ಸಹಾಯ ಪಡೆಯುವ ರಾಷ್ಟ್ರಗಳ ಪಟ್ಟಿಯಿಂದ ಗುಜರಾತನ್ನು ತೆಗೆದು ಹಾಕಲು ವಾರದ ಹಿಂದಷ್ಟೆ ಹೇಳಿದ್ದ ಮೋದಿ ಮತ್ತೆ ಯುದ್ಧ ಸನ್ನದ್ಧವಾಗಿರುವಂತೆ ತೋರುತ್ತದೆ.
ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು, "ಆದರೆ, ಅವರು ಹೇಗೆ ನನ್ನನ್ನು ಗಲ್ಲಿಗೇರಿಸುತ್ತಾರೆ. ಸಂಸತ್ ಭವನದ ಮೇಲೆ 2001ರಲ್ಲಿ ದಾಳಿ ಮಾಡಿದ ಅಫ್ಜಲ್ ಗುರುವನ್ನೇ ಗಲ್ಲಿಗೇರಿಸಲು ಅವರಿಗೆ ಸಾಧ್ಯವಾಗಿಲ್ಲ" ಎಂದು ವ್ಯಂಗ್ಯವಾಡಿದರು. ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು, ನರೇಂದ್ರ ಮೋದಿಯನ್ನು ಸಾವಿನ ವ್ಯಾಪಾರಿ(ಮೌತ್ ಕಾ ಸೌದಾಗರ್) ಎಂದು ಬಣ್ಣಿಸಿದ್ದರು. ಇದಕ್ಕೆ ಖಾರವಾದ ಪ್ರತಿಕ್ರಿಯೆ ನೀಡಲು ಅಫ್ಜಲ್ ಗುರು ಗಲ್ಲು ಪ್ರಕರಣವನ್ನು ಮೋದಿ ಬಳಸಿಕೊಂಡಿದ್ದರು. ಇದೀಗ ಅವರು ಮತ್ತೆ ಈ ಪ್ರಕರಣವನ್ನು ಕೆದಕಿದ್ದಾರೆ.
|