ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಕುರಿತಾಗಿ ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರೊಂದಿಗೆ ಮಂಗಳವಾರ ಮಾತುಕತೆಯನ್ನು ನಡೆಸಿರುವ ಬಾಹ್ಯ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರು, ಮಾತುಕತೆಯ ಕುರಿತಾಗಿ ಈ ಸಂದರ್ಭದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಪ್ಪಂದದ ಕುರಿತಾಗಿ ಪ್ರಕಾಶ್ ಕಾರಟ್ ಅವರೊಂದಿಗೆ ಸಭೆಯ ನಂತರ ಏನಾಯಿತು ಎಂಬುದಾಗಿ ಕೇಳಲಾದ ಪ್ರಶ್ನೆಗೆ, ಸದ್ಯಕ್ಕೆ ಯಾವುದನ್ನೂ ಹೇಳಲಾಗುವುದಿಲ್ಲ ಎಂದು ಉತ್ತರಿಸಿದ್ದಾರೆ.
ಅಲ್ಲದೆ, ಈ ಕುರಿತಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಪ್ರಣಬ್ ಮುಖರ್ಜಿ ನಿರಾಕರಿಸಿದ್ದಾರೆ.
ಏನೇ ಆದರೂ, ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೆ ತನ್ನ ಪಕ್ಷವು ಬೆಂಬಲ ನೀಡುವುದಿಲ್ಲ ಎಂದು ಸಿಪಿಐ(ಎಂ) ಅಧ್ಯಕ್ಷ ಸೀತಾರಾಂ ಯಚೂರಿ ಅವರು ಹೇಳಿಕೆ ನೀಡುವ ಮೂಲಕ, ಒಪ್ಪಂದದ ಕುರಿತಾಗಿ ಮುಖರ್ಜಿ ಹೊಂದಿರುವ ಎಲ್ಲಾ ವಿಶ್ವಾಸವನ್ನು ಭಗ್ನಗೊಳಿಸಿದ್ದಾರೆ.
ಏತನ್ಮಧ್ಯೆ, ಈ ಒಪ್ಪಂದದ ಕುರಿತಾಗಿ ಸಿಪಿಐ ನಾಯಕ ಎ.ಬಿ.ಬರ್ದನ್ ಅವರೂ ಪ್ರತ್ಯೇಕವಾಗಿ ವಿರೋಧ ವ್ಯಕ್ತಪಡಿಸಿದ್ದು, ಒಂದು ವೇಳೆ ಯುಪಿಎ ಸರಕಾರವು ಭಾರತದ ಇಂಧನ ರಕ್ಷಣೆಯ ಕುರಿತಾಗಿ ನಿಜವಾಗಿಯೂ ಕಾಳಜಿ ಹೊಂದಿದ್ದಲ್ಲಿ, ಇರಾನ್-ಪಾಕಿಸ್ತಾನ-ಭಾರತ ಅನಿಲ ಕೊಳವೆ ಯೋಜನೆ ಬಗ್ಗೆ ಯಾಕೆ ಆಸಕ್ತಿ ತೋರುವುದಿಲ್ಲ ಎಂಬುದಾಗಿ ಮರುಪ್ರಶ್ನಿಸಿದ್ದಾರೆ.
|