ಗುಜ್ಜಾರರು ಮತ್ತು ರಾಜಸ್ಥಾನ ಸರಕಾರದ ನಡುವಿನ ಮಾತುಕತೆಯು ಮಂಗಳವಾರ ರಾತ್ರಿ ಕೊನೆಗೂ ಒಂದು ಹಂತಕ್ಕೆ ತಲುಪಿದ್ದು ಉಭಯ ಬಣಗಳು ಸದ್ಯವೇ ಒಪ್ಪಂದ ಒಂದಕ್ಕೆ ಸಹಿಹಾಕಲಿವೆ.
ಮಾತುಕತೆಯ ಬಳಿಕದ ಮುಗುಳ್ನಗು ಮತ್ತು ಅವರ ವರ್ತನೆಗಳು ಬಿಕ್ಕಟ್ಟು ಅಂತ್ಯಗೊಂಡಿದೆ ಎಂಬ ಕುರಿತ ಸ್ಪಷ್ಟ ಸುಳಿವು ನೀಡುತ್ತಿತ್ತು.
ಗುಜ್ಜಾರರ ನಾಯಕ ಕಿರೋರಿ ಸಿಂಗ್ ಭೈಂಸ್ಲಾ ಮತ್ತು ರಾಜಸ್ಥಾನ ಸರಕಾರದ ನಿಯೋಗದ ನಡುವಿನ ನಿರಂತರ ಒಂಭತ್ತು ಗಂಟೆಗಳ ಮಾತುಕತೆಯು ಒಂದು ಹಂತಕ್ಕೆ ತಲುಪಿದೆ. ಎರಡೂ ಬದಿಗಳು ಮಾತುಕತೆಯು ಯಶಸ್ಸು ಸಾಧಿಸಿರುವುದಾಗಿ ಹೇಳಿವೆಯಲ್ಲದೆ ಒಪ್ಪಂದ ಒಂದಕ್ಕೆ ಬರಲಾಗಿದೆ ಎಂದೂ ತಿಳಿಸಿವೆ.
ಮುಖ್ಯ ಮಂತ್ರಿ ವಸುಂಧರಾ ರಾಜೆ ಮತ್ತು ಗುಜ್ಜಾರರ ನಾಯಕ ಕಿರೋರಿ ಸಿಂಗ್ ಭೈಂಸ್ಲಾ ಅವರು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಮಾತುಕತೆಗಳು ಯಶಸ್ವಿಯಾಗಿದ್ದು, ಇದೊಂದು ಐತಿಹಾಸಿಕ ಒಪ್ಪಂದವಾಗಲಿದೆ ಎಂದು ಭೈಂಸ್ಲಾ ಹೇಳಿದ್ದಾರೆ. ಆದರೆ ಮಾತುಕತೆಯ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ, ವಿಶೇಷ ವರ್ಗದಡಿಯಲ್ಲಿ ವಸುಂಧರಾ ಸರಕಾರವು ಗುಜ್ಜಾರರಿಗೆ ಶೇ. ನಾಲ್ಕುರಷ್ಟು ಮೀಸಲಾತಿ ನೀಡುವ ರಾಜಿ ಸೂತ್ರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
|