'ಇಸ್ಲಾಮಿಕ್ ಉಗ್ರವಾದ'ದ ಪಿಡುಗನ್ನು ತೊಡೆದು ಹಾಕಲು ಹಿಂದೂ ಆತ್ಮಾಹುತಿ ದಳಗಳ ರಚನೆಗೆ ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಸಲಹೆ ಮಾಡಿದ್ದಾರೆ ಎಂದು 'ಟೈಮ್ಸ್ ನೌ' ವರದಿ ಮಾಡಿದೆ.
ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಬರೆಯಲಾಗಿರುವ ವಿವಾದಾಸ್ಪದ ಸಂಪಾದಕೀಯದಲ್ಲಿ ಅವರು ಇಂತಹ ದಳಗಳ ರಚನೆಗೆ ಕರೆ ನೀಡಿದ್ದಾರೆ.
"ಭಾರತದಲ್ಲಿ ಇಸ್ಲಾಮಿಕ್ ಉಗ್ರವಾದದ ಭೀತಿ ಉದಯಿಸುತ್ತಿದೆ. ಇದನ್ನು ಹಿಂದೂ ಉಗ್ರವಾದದ ಮೂಲಕ ಎದುರಿಸಲು ಇದು ಸಮಯ. ಹಿಂದೂ ಸಮಾಜದ ಅಸ್ತಿತ್ವದ ಖಚಿತತೆಗೆ ಆತ್ಮಾಹುತಿ ದಳಗಳು ಸಿದ್ಧವಾಗಿರಬೇಕು" ಎಂದು ಅವರು ಹೇಳಿದ್ದಾರೆ.
ಹಿಂದೂಗಳು ಬಾಂಬ್ ತಯಾರಿಸುತ್ತಿದ್ದಾರೆ ಎಂಬ ವಿಚಾರ ತನ್ನ ಕಿವಿಗೆ ಬಿದ್ದಾಗ ತಾನು ಸಂತೋಷ ಪಟ್ಟಿದ್ದೆ, ಆದರೆ ಅವರು ಅವುಗಳನ್ನು ಹಿಂದೂಗಳನ್ನು ಗಾಯಗೊಳಿಸಲು ಬಳಸಿದ್ದಾರೆಂಬ ವಿಚಾರ ತಿಳಿದಾಗ ಅವರ ಬಗ್ಗೆ ನಾಚಿಕೆಯಾಯಿತು ಎಂದು ಹೇಳಿದ್ದಾರೆ. ಥಾಣೆಯಲ್ಲಿ ಇತ್ತೀಚೆಗೆ ಥಿಯೇಟರ್ ಒಂದರಲ್ಲಿ ಸಂಭವಿಸಿರುವ ಸ್ಫೋಟಕೃತ್ಯದಲ್ಲಿ ಹಿಂದೂ ಸಂಘಟನೆಯ ಕೈವಾಡವಿದೆ ಎಂಬ ಅಂಶದ ಹಿನ್ನೆಲೆಯಲ್ಲಿ ಅವರ ಈ ಅಭಿಪ್ರಾಯ ಹೊರಬಿದ್ದಿದೆ ಎನ್ನಲಾಗಿದೆ.
ಹಿಂದೂ ಆತ್ಮಾಹುತಿ ದಳದ ರಚನೆಗೆ ಈ ಹಿಂದೆಯೂ ಬಾಳಾಠಾಕ್ರೆ ಕರೆ ನೀಡಿದ್ದರು.
|