ವಿಶೇಷ ಪ್ರತ್ಯೇಕ ಹಿಂದುಳಿದ ವರ್ಗಗಳ ವಿಭಾಗದಲ್ಲಿ ಗುಜ್ಜಾರ್ ಸಮುದಾಯಕ್ಕೆ ಶೇ.ಐದರಷ್ಟು ಮೀಸಲಾತಿ ನೀಡಲು ರಾಜಸ್ಥಾನ ಸರಕಾರವು ಒಪ್ಪಿಗೆ ಸೂಚಿಸುವುದರೊಂದಿಗೆ, ಕಳೆದ ಕೆಲವು ದಿನಗಳಿಂದ ಮೀಸಲಾತಿಯನ್ನು ಆಗ್ರಹಿಸಿ ಗುಜ್ಜಾರ್ ಸಮುದಾಯವು ನೆಡಸುತ್ತಿದ್ದ ಪ್ರತಿಭಟನೆಯು ತೆರೆಕಂಡಿದೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು, ಬ್ರಾಹ್ಮಣ, ರಜಪೂತ, ವೈಶ್ಯ ಮತ್ತು ಕಾಯಸ್ಥ ಸಮುದಾಯಗಳಲ್ಲಿನ ಬಡ ಕುಟುಂಬಗಳಿಗೆ ಶೇ.14ರಷ್ಟು ಮೀಸಲಾತಿಯನ್ನು ನೀಡಲು ರಾಜಸ್ಥಾನ ಸರಕಾರವು ನಿರ್ಧರಿಸಿದೆ.
ಗುಜ್ಜರ್ ಸಮುದಾಯದ ಜೊತೆಗೆ ರೆಬರಿ ಹಾಗೂ ಬಂಜಾರಾಸ್ ವರ್ಗಗಳಿಗೂ ಶೇ.ಐದರಷ್ಟು ಮೀಸಲಾತಿಯನ್ನು ನೀಡಲಾಗುವುದು ಎಂದು ಗುಜ್ಜಾರ್ ನಾಯಕ ಕಿರೋರಿ ಸಿಂಗ್ ಬೈನ್ಸಾಲಾ ಅವರೊಂದಿಗೆ ಜೈಪುರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯ ವೇಳೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ತಿಳಿಸಿದ್ದಾರೆ.
ಪರಿಶಿಷ್ಟ ಮೀನಾ ಪಂಗಡವು ಅತಿ ಹೆಚ್ಚು ಮೀಸಲಾತಿಯನ್ನು ಪಡೆಯುತ್ತಿದ್ದು, ಪ್ರಸಕ್ತ ಜಾರಿಯಲ್ಲಿರುವ ಮೀಸಲಾತಿ ಪ್ರಮಾಣಕ್ಕೆ ಧಕ್ಕೆ ಉಂಟುಮಾಡಿದರೆ, ಅತಿ ಹೆಚ್ಚು ಸೌಲಭ್ಯವನ್ನು ಪಡೆಯುತ್ತಿರುವ ಮೀನಾ ವರ್ಗಕ್ಕೆ ನೋವುಂಟಾಗಬಹುದು ಎಂಬ ಕಾರಣದಿಂದ, ಸರಕಾರವು ನೂತನ ಮೀಸಲಾತಿ ಸೌಲಭ್ಯವನ್ನು ಜಾರಿ ಮಾಡುತ್ತಿದೆ.
ಸರಕಾರದ ಇತರ ಕೆಲವು ವರ್ಗಗಳಿಗೂ ಮೀಸಲಾತಿಯ ಅಗತ್ಯವಿರುವುದನ್ನು ಮನಗಂಡಿರುವ ರಾಜಸ್ಥಾನ ಸರಕಾರವು ಪ್ರಸಕ್ತ ಜಾರಿಯಲ್ಲಿರುವ ಮೀಸಲಾತಿ ವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ನೂತನ ಮೀಸಲಾತಿ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ ಎಂದು ವಸುಂಧರಾ ರಾಜ್ ಹೇಳಿದ್ದಾರೆ.
ಗುಜ್ಜಾರ್ ಸಮುದಾಯದ ಬೇಡಿಕೆಯನ್ನು ಈಡೇರಿಸಿರುವ ರಾಜಸ್ಥಾನ ಸರಕಾರಕ್ಕೆ ಗುಜ್ಜಾರ್ ನಾಯಕ ಬೈನ್ಸಾಲಾ ಇದೇ ವೇಳೆ ಕೃತಜ್ಞತೆ ಸಲ್ಲಿಸಿದ್ದು, ಬೇಡಿಕೆಯು ಈಡೇರಿದ ಕಾರಣದಿಂದ ಗುಜ್ಜಾರ್ ಸಮುದಾಯವು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
|