ಎಡಪಕ್ಷಗಳು ವಿರೋಧ ಸೂಚಿಸಿದರೂ, ಅಣುಒಪ್ಪಂದವನ್ನು ಕಾರ್ಯಗತಗೊಳಿಸುವ ಪ್ರಯತ್ನವನ್ನು ನಿಲ್ಲಿಸಬಾರದು ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಸೋನಿಯಾ ಗಾಂಧಿಯವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಬುಧವಾರ ಮುಂಜಾನೆ ಸೋನಿಯಾ ಗಾಂಧಿ, ಪ್ರಧಾನಿ ಸಿಂಗ್ ಅವರನ್ನು ಭೇಟಿಯಾಗಿರುವ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯೋಜನೆಯಲ್ಲಿ ಯಾವುದೇ ಪ್ರಗತಿ ಇಲ್ಲವೆಂದಾದಲ್ಲಿ ಸುಮ್ಮನೆ ದಿನದೂಡುವುದರಿಂದ ಯಾವ ಉದ್ದೇಶವೂ ನೆರವೇರಿದಂತಾಗುವುದಿಲ್ಲ, ಹಾಗಾಗಿ ಸದ್ಯವೇ ತೀರ್ಮಾನವನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಅವರು ಸೋನಿಯಾಗೆ ಮನವರಿಕೆ ಮಾಡಿದ್ದಾರೆಂದು ಹೇಳಲಾಗಿದೆ.
ಏತನ್ಮಧ್ಯೆ ಯುಪಿಎ ಮತ್ತು ಎಡಪಕ್ಷಗಳ ನಡುವಿನ ಸಭೆಯ ಮುಂದೂಡಿಕೆಗೆ ಸಿರಿಯ ಅಧ್ಯಕ್ಷ ಬಶರ್ ಅಲ್ ಅಸ್ಸದ್ ಅವರ ಭೇಟಿಯ ಕಾರಣ ನೀಡಿರುವುದು ಕೇವಲ 'ಕಾರಣ' ಎಂದೂ ಹೇಳಲಾಗಿದ್ದು, ಎಡಪಕ್ಷಗಳ ಮನ ಒಲಿಕೆಯ ವೈಫಲ್ಯವೇ ಇದಕ್ಕೆ 'ನೈಜ' ಕಾರಣ ಎಂದು ಹೇಳಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಮತ್ತು ಪ್ರಕಾಶ್ ಕಾರಟ್ ನಡುವಿನ ಮಾತುಕತೆಯು ಸಫಲವಾಗದ ಹಿನ್ನೆಲೆಯಲ್ಲಿ ಯುಪಿಎ-ಎಡಪಕ್ಷಗಳ ಮಾತುಕತೆಯಲ್ಲಿ ಯಾವುದೇ ಲಾಭವಿಲ್ಲ ಎಂದು ಅರಿತ ಸರಕಾರ ಈ ಸಭೆಯನ್ನು ಮುಂದೂಡಿದೆ.
ಏತನ್ಮಧ್ಯೆ, ತನ್ನ ನಿರ್ಧಾರದಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದಿರುವ ಎಡಪಕ್ಷಗಳು, ಕೊನೆ ಕ್ಷಣದ ಬದಲಾವಣೆಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಸಭೆಯ ಮುಂದೂಡಿಕೆಯು ಸರಕಾರದ ನಿರ್ಧಾರ ಎಂದೂ ಸ್ಪಷ್ಟಪಡಿಸಿದೆ.
|