ಸಿಕ್ಕಿಂನಲ್ಲಿ ಚೀನಾ ಸೇನೆಯ ಅತಿಕ್ರಮಣ ಪ್ರವೇಶವನ್ನು ಬಲವಾಗಿ ಖಂಡಿಸಿರುವ ಭಾರತ, ಸಿಕ್ಕಿಂ ವಿಚಾರವು ಇದೀಗಾಗಲೇ ಇತ್ಯರ್ಥಗೊಂಡ ವಿಷಯವಾಗಿದೆ ಎಂದು ಹೇಳಿದೆ.
ಸಿಕ್ಕಿಂನಲ್ಲಿ ಸುಮಾರು ಒಂದು ಕಿಲೋಮೀಟರಿನಷ್ಟು ಪ್ರದೇಶದೊಳಕ್ಕೆ, ಪಿಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಯು ನುಸುಳಿರುವುದಕ್ಕೆ ಭಾರತವು ಬೀಜಿಂಗ್‌ನ ವಿವರಣೆ ಕೇಳಿದೆ.
"ಇದು ದುರದೃಷ್ಟಕರ. ಭಾರತಕ್ಕೆ ಸಂಬಂಧಿಸಿದಂತೆ ಸಿಕ್ಕಿಂ ಇದೀಗಾಗಲೆ ಇತ್ಯರ್ಥಗೊಂಡ ವಿಚಾರವಾಗಿದೆ. ಈ ಕುರಿತಂತೆ ಏನಾದರೂ ಸಮಸ್ಯೆಗಳಿದ್ದರೆ ಧ್ವಜ ಸಭೆಯಲ್ಲಿ ಅದನ್ನು ಎತ್ತಬಹುದಿತ್ತು. ಅಥವಾ ಇನ್ನೂ ಸಮಸ್ಯೆ ಇದೆ ಎಂದಾದಲ್ಲಿ, ಎರಡು ಜವಾಬ್ದಾರಿಯುತ ರಾಷ್ಟ್ರಗಳಾದ ನಾವು ಅದನ್ನು ಇತ್ಯರ್ಥಗೊಳಿಸಿಕೊಳ್ಳುತ್ತೇವೆ.ಗಡಿ ವಿವಾದವನ್ನು ಶೀಘ್ರ ಪರಿಹರಿಸಲು ಚೀನ ಒತ್ತಡ ಹೇರುವ ಮಾರ್ಗ ಇದಾಗಿರಬಹುದು" ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಪಲ್ಲಂ ರಾಜು ಹೇಳಿದ್ದಾರೆ.
ಚೀನ ಪಡೆಗಳ ಇತ್ತೀಚಿನ ಅತಿಕ್ರಮಣ ಸೋಮವಾರದಂದು ನಡೆದಿದೆ. ಚೀನಾ ಪಡೆಯ ಗಸ್ತು ವಾಹನವು ಭಾರತದ ಗಡಿದಾಟಿ ಸುಮಾರು ಒಂದು ಕಿಲೋಮೀಟರಿನಷ್ಟು ಭಾರತದೊಳಕ್ಕೆ ನುಸುಳಿದ್ದು, ಮತ್ತೆ ಮರಳಿದೆ. ಸಿಕ್ಕಿಂನ ಉತ್ತರದ ತುದಿಯನ್ನು ಫಿಂಗರ್ ಏರಿಯಾ ಎಂದು ಕರೆಯಲಾಗುತ್ತಿದೆ. ಉತ್ತರ ಸಿಕ್ಕಿಂನಲ್ಲಿ 2.1 ಚದರ ಕಿಲೋಮೀಟರ್ ತನ್ನದೆಂದು ಚೀನ ಹಕ್ಕೊತ್ತಾಯ ಮಂಡಿಸುವ ವೇಳೆಗೆ ಈ ಪ್ರದೇಶ ಬೆಳಕಿಗೆ ಬಂದಿದ್ದು, ಇದೇ ಪ್ರದೇಶದಲ್ಲಿ ಚೀನದ ಇತ್ತೀಚಿನ ಅತಿಕ್ರಮಣ ನಡೆದಿದೆ.
ಈ ಅತಿಕ್ರಮಣ ವರದಿಯನ್ನು ಭಾರತೀಯ ಸೇನೆಯು ಅಲ್ಲಗಳೆದಿಲ್ಲ, ಬದಲಿಗೆ ಇದೊಂದು ವಾಡಿಕೆಯಂತಾಗಿದೆ ಎಂದು ಹೇಳಿದೆ. ಸಿಕ್ಕಿಂ ಗಡಿ ವಿಚಾರ ಒಂದು ಇತ್ಯರ್ಥಗೊಂಡ ವಿಚಾರ ಎಂದು ಭಾರತ ಹೇಳುತ್ತಿದ್ದರೆ, ಚೀನ ಈ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಿದೆ.
|