ಗುಜ್ಜಾರರ ಮುಖಂಡ ಮತ್ತು ರಾಜಸ್ಥಾನ ಸರಕಾರವು ಒಪ್ಪಂದವೊಂದನ್ನು ತಲುಪಿರುವ ಹಿನ್ನೆಲೆಯಲ್ಲಿ, ಗುಜ್ಜಾರ್ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಕೋರಿ ಕಳೆದ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಉಗ್ರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ.
ಗುಜ್ಜರ್ ಸಮುದಾಯದ ಬೇಡಿಕೆಯನ್ನು ಪರಿಗಣಿಸಿದ ರಾಜಸ್ಥಾನ ಸರಕಾರ, ಶೇ.5ರಷ್ಟು ಮೀಸಲಾತಿಯನ್ನು ಘೋಷಿಸಿರುವ ಬಗ್ಗೆ ಗುಜ್ಜರ್ ಮುಖಂಡ ಕಿರೋರಿ ಸಿಂಗ್ ಭೈಂಸ್ಲಾ ಹರ್ಷ ವ್ಯಕ್ತಪಡಿಸಿದ್ದು, ಪ್ರತಿಭಟನೆಯನ್ನು ಹಿಂತೆಗೆದುಕೊಂಡಿರುವುದಾಗಿ ಗುರುವಾರ ಘೋಷಿಸಿದ್ದಾರೆ. ಪ್ರತಿಭಟನಾ ನಿರತ ಕಾರ್‌ವಾಡಿ-ಪಿಲುಪುರಾ ಸ್ಥಳಕ್ಕೆ ಬುಧಾರ ರಾತ್ರಿ ಆಗಮಿಸಿದ ಭೈಂಸ್ಲಾ , ರಾಜಸ್ಥಾನ ಸರಕಾರದೊಂದಿಗೆ ನಡೆದ ಮಾತು ಕತೆ ಮತ್ತು ಒಪ್ಪಂದ ತುಂಬಾ ಸಂತೋಷ ನೀಡಿರುವುದಾಗಿ ಹೇಳಿದ್ದಾರೆ. 70ವರ್ಷ ವಯಸ್ಸಿನ ಸೇನಾ ನಿವೃತ್ತ ಕರ್ನಲ್ ಆಗಿರುವ ಭೈಂಸ್ಲಾ, ಸಮುದಾಯದ ಬೇಡಿಕೆಯನ್ನು ಸರಕಾರ ಈಡೇರಿಸಿದ್ದಕ್ಕಾಗಿ ಮುಖ್ಯಮಂತ್ರಿ ವಸುಂಧರಾ ರಾಜೆಯನ್ನು ಅಭಿನಂದಿಸಿದರು.
ಸುಮಾರು ಒಂದು ತಿಂಗಳಿಂದ ನಡೆದ ಪ್ರತಿಭಟನೆಯಲ್ಲಿ, ಪೊಲೀಸರು ಗೋಲಿಬಾರ್ ನಡೆಸಿದ್ದು 40 ಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಮಾತುಕತೆಯ ಕುರಿತಂತೆಯೂ ರಾಜಸ್ಥಾನ ಸರಕಾರ ಮತ್ತು ಗುಜ್ಜಾರ ನಾಯಕರು ಬಿಗಿಪಟ್ಟು ಹಿಡಿದಿದ್ದು, ಮಾತುಕತೆಗೆ ಹಲವು ಬಾರಿ ತಡೆಯುಂಟಾಗಿತ್ತು. ಇದೀಗ ಎಲ್ಲವೂ ಸುಖಾಂತ್ಯವಾದಂತಾಗಿದೆ.
|