ಭಾರೀ ಮಳೆಯಿಂದಾಗಿ ಪ್ರವಾಹ ಪೀಡಿತವಾಗಿರುವ ಪಶ್ಚಿಮ ಬಂಗಾಳದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ, ಸೇನೆಯನ್ನು ಕರೆಸಲಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಜಿಲ್ಲೆಗಳು ಜಲಾವೃತವಾಗಿವೆ. ಮಳೆಯಿಂದಾಗಿ ಇದುವರೆಗೆ ಸುಮರು 11 ಜನ ಸಾವನ್ನಪ್ಪಿದ್ದಾರೆ.
ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ ಜಿಲ್ಲೆಗಳು ಅತಿ ಹೆಚ್ಚು ಹಾನಿಗೀಡಾಗಿದ್ದು, 16 ಲಕ್ಷಕ್ಕೂ ಅಧಿಕ ಮಂದಿ ತೊಂದರೆಗೀಡಾಗಿದ್ದಾರೆ. ಈ ಪ್ರದೇಶಗಳಲ್ಲಿ ಗುರುವಾರ ಮುಂಜಾನೆ 12 ಮಂದಿ ಕಾಣೆಯಾಗಿರುವುದಾಗಿ ವರದಿ ತಿಳಿಸಿದೆ.
ಸೇನೆಯು ರಕ್ಷಣಾ ಕಾರ್ಯಕ್ಕೆ ಧಾವಿಸಿದೆಯಾದರೂ, ದುರ್ಬಲ ಸಂಪರ್ಕದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ರಕ್ಷಣಾ ವಕ್ತಾರ ಕ್ಯಾಪ್ಟನ್ ಆರ್.ಕೆ.ದಾಸ್ ಹೇಳಿದ್ದಾರೆ.
ಒರಿಸ್ಸಾದಲ್ಲೂ ಹಾನಿ ಒರಿಸ್ಸಾದಲ್ಲಿಯೂ ಪ್ರಮುಖ ನದಿಗಳು ತುಂಬಿ ಹರಿಯುತ್ತಿದ್ದು, ಅಪಾಯ ಮಟ್ಟವನ್ನು ದಾಟಿವೆ. ಸುಮಾರು 850 ಗ್ರಾಮಗಳು ಜಲಾವೃತವಾಗಿವೆ. ವಾಯುದಳವು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರವಾಹ ಪೀಡಿದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.
ಬಲಾಸೂರ್, ಮಯೂರ್‌ಬಂಜ್, ಬದ್ರಾಕ್ ಮತ್ತು ಜೈಪುರ ಜೆಲ್ಲೆಗಳು ಅತ್ಯಂತ ತೊಂದರೆಗೀಡಾಗಿವೆ. ಸುವರ್ಣರೇಖಾ, ಬುಧಬಲಂಗ ಮತ್ತು ಜಲಕ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಈ ನದಿಗಳು ಇದ್ದಕ್ಕಿದ್ದಂತೆ ಉಕ್ಕಿ ಹರಿಯುತ್ತಿವೆ.
ಏತನ್ಮಧ್ಯೆ ಪ್ರವಾಹದಿಂದಾಗಿ ಸಂಪರ್ಕ ಕಳೆದುಕೊಂಡಿರುವ ಮಂದಿ ಅನ್ನಾಹಾರಗಳಿಲ್ಲದೆ, ತೊಂದರೆಗೀಡಾಗಿದ್ದಾರೆ.
|