ಲಷ್ಕೆರೆ ತೊಯ್ಬಾ ಉಗ್ರಗಾಮಿ ಸಂಘಟನೆಯ ಸ್ವಯಂಘೋಷಿತ ವಿಭಾಗೀಯ ಕಮಾಂಡರ್ ಒಬ್ಬ ಸೇರಿದಂತೆ, ಕಾಶ್ಮೀರ ಕಣಿವೆಯಲ್ಲಿ ನಡೆದ ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.
ಲಷ್ಕರೆ ಸಂಘಟನೆಯ ಮೆಹಬೂಬ್ ಅಹ್ಮದ್ ಅಫ್ರಿದಿ ಅಲಿಯಾಸ್ ಜುಗ್ನು ಎಂಬಾತ ಬಾರಾಮುಲ್ಲ ಜಿಲ್ಲೆಯಲ್ಲಿ ಶುಕ್ರವಾರ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
32 ರಾಷ್ಟ್ರೀಯ ರೈಫಲ್‌ಗಳು ಮತ್ತು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಪಡೆಯು ಖಚಿತ ಮಾಹಿತಿಯಾಧಾರದಲ್ಲಿ ನಸುಕಿಗೂ ಮುಂಚಿತವಾಗಿ ಜಂಟಿ ಕಾರ್ಯಾಚರಣೆ ನಡೆಸಿತ್ತು. ಉಗ್ರನನ್ನು ಶರಣಾಗಲು ಹೇಳಿದಾಗ ಆತ ಗುಂಡು ಹಾರಾಟ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಕಾರ್ಯಾಚರಣೆ ಪಡೆಯೂ ಗುಂಡುಹಾರಿಸಿರುವುದಾಗಿ ವಕ್ತಾರರು ಹೇಳಿದ್ದಾರೆ.
ಗುರುವಾರ ರಾತ್ರಿ ಸೋನಾಪಿಂಡಿ ಪ್ರದೇಶದಲ್ಲಿ ಕುಪ್ವಾರ ಜಿಲ್ಲಾ ಪೊಲೀಸರು ಮತ್ತು ಸೇನೆಯು ನಡೆಸಿರುವ ಇನ್ನೊಂದು ಕಾರ್ಯಾಚರಣೆಯಲ್ಲಿ, ಇತರ ಮೂವರು ಉಗ್ರರು ಹತರಾಗಿದ್ದಾರೆ.
|