ಎಡ ಪಕ್ಷಗಳ ಸಹಮತವಿಲ್ಲದೆ ಒಪ್ಪಂದವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ, ಕ್ಷಿಪ್ರ ಲೋಕಸಭಾ ಚುನಾವಣೆಯನ್ನು ಬಯಸದ ಆಡಳಿತಾರೂಢ ಯುಪಿಎ ಸರಕಾರವು ,ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ವಿಷಯದಲ್ಲಿ ಕೊಂಚ ಮೃದು ಧೋರಣೆಯನ್ನು ತಾಳಿದೆ.
ಎಡಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಪ್ಪಂದವನ್ನು ಮುಂದುವರಿಸಬೇಕೆಂಬುದು ಕಾಂಗ್ರೆಸ್ ಪಕ್ಷದ ನಿಲುವು. ಯುಪಿಎ ಸರಕಾರವು ಎಡಪಕ್ಷಗಳ ವಿರೋಧದೊಂದಿಗೆ ಒಪ್ಪಂದವನ್ನು ಮುಂದುವರಿಸುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹ್ಮದ್ ಸ್ಪಷ್ಟಪಡಿಸಿದ್ದು, ಈ ಒಪ್ಪಂದವು ಜಾರಿಗೊಳ್ಳದಿದ್ದಲ್ಲಿ ಯಾವುದೇ ನಷ್ಟ ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಡಪಕ್ಷಗಳಿಂದ ವಿರೋಧವನ್ನು ಎದುರಿಸುತ್ತಿರುವ ಪರಮಾಣು ಒಪ್ಪಂದವನ್ನು ಜಾರಿಗೊಳಿಸದಿದ್ದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನಷ್ಟವಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಒಪ್ಪಂದ ಮುಂದುವರಿಸದಿದ್ದಲ್ಲಿ ಸರಕಾರಕ್ಕೆ ಯಾವುದೇ ರೀತಿಯ ಮುಖಭಂಗ ಉಂಟಾಗುವುದಿಲ್ಲ. ಯುಪಿಎ ಸರಕಾರಕ್ಕೆ ಎಡಪಕ್ಷಗಳ ದೀರ್ಘಾವಧಿಯ ಸ್ನೇಹ ಮತ್ತು ಬೆಂಬಲ ಮುಖ್ಯ. ಈ ಸಹಕಾರವನ್ನು ಆಡಳಿತ ಪೂರ್ಣದವರೆಗೂ ಮುಂದುವರಿಸಲು ಯುಪಿಎ ಸರಕಾರವು ಪ್ರಯತ್ನಿಸುತ್ತದೆ ಎಂದು ಉತ್ತರಿಸಿದ್ದಾರೆ.
ಏತನ್ಮಧ್ಯೆ, ಪರಮಾಣು ಒಪ್ಪಂದ ನಡೆಯದಿದ್ದಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಪ್ರಧಾನಿ ಅವರ ಹೇಳಿಕೆಯ ವರದಿಯನ್ನು ನಿರಾಕರಿಸಿದ ಅವರು, ಈ ವರದಿಗಳು ಅಸಂಬದ್ಧ. ಅಂತಹ ವಿಚಾರ ಇರಲೂ ಕೂಡದು. ಅಲ್ಲದೆ, ಪ್ರಧಾನಮಂತ್ರಿಯವರು ಕಾಂಗ್ರೆಸ್ ಹಾಗೂ ಯುಪಿಎ ಮೈತ್ರಿ ಪಕ್ಷಗಳ ಸಂಪೂರ್ಣ ಸಹಕಾರವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಏನೇ ಆದರೂ, ಎಡಪಕ್ಷಗಳು ಸಹಕಾರ ನೀಡದಿದ್ದಲ್ಲಿ ಸರಕಾರವು ಒಪ್ಪಂದವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
|